ಮಂಗಳೂರು,ಜುಲೈ.1: ಮಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಭೂಕುಸಿತವಾಗಿ ಸಾವು,ನೋವು ಉಂಟಾಗಿದೆ.
ಮಂಗಳೂರು ನಗರದ ಕಂಕನಾಡಿ ಸಮೀಪ ನಾಗುರಿಯಲ್ಲಿ ಭೂಮಿ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಶಾಂತಾ (46), ಅನಾಮಿಕಾ ಚೌರಾಸಿಯಾ (8) ಹಾಗೂ ಪರಿ (4) ಮೃತಪಟ್ಟ ದುರ್ದೈವಿಗಳು.
ಈ ನತದೃಷ್ಟರು ಮೂಲತಃ ಬಿಹಾರದ ನಿವಾಸಿಗಳು, ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಕೃತಕ ನೆರೆ ಸೃಷ್ಡಿಯಾದರೆ,ಕೆಲವೆಡೆ ಭೂಕುಸಿತವಾಗಿದೆ.
ಕಂಕನಾಡಿ ಪೊಲೀಸ್ ಠಾಣೆ ಸಮೀಪ ನಾಗುರಿಯಲ್ಲಿ ಮನೆಯ ಮೇಲೆ ಭೂಕುಸಿತವಾಗಿದೆ.
ಈ ವೇಳೆ ಮನೆಯೊಳಗೆ ನಾಲ್ವರು ಮಣ್ಣಿನಡಿ ಸಿಲುಕಿದ್ದರು. ಸ್ಥಳೀಯರು, ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆದರು.ಆದರೆ, ತಾಯಿ ಹಾಗೂ ಅವರ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು.
ಬಾಡಿಗೆ ಮನೆಯಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು. ಬುಧವಾರ ಮುಂಜಾನೆ ಸುಮಾರು 4.45 ರ ವೇಳೆಗೆ ಗುಡ್ಡ ಕುಸಿದ ಪರಿಣಾಮ ಮನೆಯ ಹಿಂಭಾಗದ ಗೋಡೆ ಸಂಪೂರ್ಣ ಮಲಗಿದ್ದವರ ಮೇಲೆ ಬಿದ್ದಿದೆ. ಇದರಿಂದ ಉಸಿರುಗಟ್ಟಿ ಮೂವರು ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣ್ಣಿನ ತೆರವು ಕಾರ್ಯ ಮುಂದುವರಿದಿದ್ದು, ಮತ್ಯಾರಾದರೂ ಮಣ್ಣಿನಡಿ ಸಿಲುಕಿದ್ದಾರೆಯೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು, ಮೃತ ಕುಟುಂಬಗಳಿಗೆ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.
