ಹುಣಸೂರು: ಹುಣಸೂರು ತಾಲೂಕು ಹನಗೋಡು ಹೋಬಳಿ,ಕುರುಬರ ಹೊಸಳ್ಳಿ ಗ್ರಾಮದ ಜನರ ಪಾಡು ಹೇಳತೀರದಾಗಿದೆ.
ಈ ಗ್ರಾಮ ಒಂದು ಪ್ರಮುಖವಾದ ರಸ್ತೆಯನ್ನು ಹೊಂದಿದೆ ಈ ರಸ್ತೆ ಹುಣಸೂರು,ಹನಗೋಡು, ಎಚ್ ಡಿ ಕೋಟೆ, ಗದ್ದಿಗೆ, ಅದರಲ್ಲೂ ಅತ್ಯಂತ ಪ್ರಮುಖವಾದ ದುಬಾರೆ ಆನೆ ಶಿಬಿರ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಇಂತಹ ಪ್ರಮುಖ ರಸ್ತೆ ಸುಮಾರು ಎರಡೂವರೆ ಕಿಲೋಮೀಟರ್ ವರೆಗೂ ಗಬ್ಬೆದ್ದು ಹೋಗಿದೆ. ಇದು ಮಣ್ಣಿನಿಂದ ಮಾಡಿದ ರಸ್ತೆಯಾಗಿದ್ದು ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಬಿಡುತ್ತದೆ.
ರಸ್ತೆಯ ಎರಡೂ ಪಕ್ಕದಲ್ಲಿ ಜನ ಮನೆ ಕಟ್ಟಿಕೊಂಡಿದ್ದಾರೆ.ಜನ ಮನೆಯಿಂದ ಹೊರಬರಲು ಕೂಡ ಅಂಜುವಂತಾಗಿದೆ, ಅದರಲ್ಲೂ ವೃದ್ಧರು, ಮಹಿಳೆಯರು, ಗರ್ಭಿಣಿಯರು ಮತ್ತು ಪುಟ್ಟ ಮಕ್ಕಳು ಈ ರಸ್ತೆಯಲ್ಲಿ ಓಡಾಡುವುದು ಅತ್ಯಂತ ದುಸ್ತರ.
ಇಡೀ ರಸ್ತೆ ಕೆಮ್ಮಣ್ಣಿನಿಂದ ಕೂಡಿದ್ದು ಮಳೆಯ ನೀರು ನಿಂತು ಹಳ್ಳಕೊಳ್ಳಗಳಾಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ಯಾರೇ ಕಾಲಿಟ್ಟರೂ ಜಾರಿ ಬೀಳುವುದು, ಕೈಕಾಲು ಮುರಿದುಕೊಳ್ಳುವುದಂತೂ ಗ್ಯಾರಂಟಿ. ಹಾಗಾಗಿ ವೃದ್ಧರು ಹೆಜ್ಜೆ ಮೇಲೆ ಹೆಜ್ಜೆಯನ್ನು ಹುಷಾರಾಗಿ ಇಟ್ಟು ನಡೆಯುವಂತಹ ಪರಿಸ್ಥಿತಿ ಎದುರಾಗಿದೆ, ಸ್ವಲ್ಪ ಯಾಮಾರಿದರು ಬೀಳುವುದು ಕಟ್ಟಿಟ್ಟ ಬುತ್ತಿ.
ಬಹಳಷ್ಟು ಗ್ರಾಮಗಳಿಂದ ಈ ರಸ್ತೆಯ ಮೂಲಕವೇ ಜನರು ಸಂಪರ್ಕಿಸಬೇಕಿದೆ. ಹಾಗಾಗಿ ಪ್ರತಿದಿನ ವಾಹನ ಸಂಚಾರ ಇದ್ದೇ ಇರುತ್ತದೆ, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಬರಬೇಕಿದೆ, ಸ್ವಲ್ಪ ನಿರ್ಲಕ್ಷ ವಹಿಸಿದರೂ ಹಳ್ಳಕ್ಕೆ ಇಲ್ಲಾ ಪಕ್ಕಕ್ಕೆ ಬಿದ್ದು ಅನಾಹುತವಾಗುವುದು ನಿಶ್ಚಿತ.ಹಾಗಾಗಿ ಈ ರಸ್ತೆ ಡೇಂಜರ್.ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಹೆದರುತ್ತಾರೆ.ಅಷ್ಟರ ಮಟ್ಟಿಗೆ ಹಾಳಾಗಿದೆ.
ಕಳೆದ ಐದಾರು ವರ್ಷಗಳಿಂದಲೂ ಈ ರಸ್ತೆ ಇದೇ ರೀತಿಯಾಗಿದೆ, ಇಲ್ಲಿನ ಜನ ಪ್ರತಿನಿಧಿಗಳಿಗೆ ಈ ರಸ್ತೆ ಕಣ್ಣಿಗೆ ಕಾಣುವುದಿಲ್ಲವೇ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರುಬರಹೊಸಳ್ಳಿ ಗ್ರಾಮದಲ್ಲಿ ಎಲ್ಲಾ ಜಾತಿಯ ಜನಾಂಗದವರು ಇದ್ದಾರೆ, ಆದರೆ ಭೋವಿ ಜನಾಂಗದವರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಸರ್ಕಾರದಲ್ಲಿ ಅಥವಾ ಜಿಲ್ಲಾಡಳಿತದಲ್ಲಿ ರಸ್ತೆ ಅಭಿವೃದ್ಧಿಗೆಂದು ಅನುದಾನ ಇದ್ದೇ ಇರುತ್ತದೆ. ಆದರೆ ಈ ಅನುದಾನ ಬಳಸಿಕೊಂಡು ರಸ್ತೆ ಅಭಿವೃದ್ಧಿಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚೆಲುವರಾಜು ಅಸಮಾಧಾನ ವ್ಯಕ್ತಪಡಿಸಿದರು.
ಏನಾದರೂ ಅನಾಹುತ ಆಗುವ ಮೊದಲು ಈ ರಸ್ತೆಯನ್ನು ಸರಿಪಡಿಸಬೇಕು ಇಲ್ಲದಿದ್ದರೆ ನಮ್ಮ ಪಕ್ಷದ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ,
ಜನಪ್ರತಿನಿಧಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
