ಬೆಂಗಳೂರು: ಮಂತ್ರಿಮಂಡಲ ವಿಸ್ತರಣೆಯು ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮತ್ತು ಅಧಿಕಾರಕೇಂದ್ರಿತ ರಾಜಕಾರಣವನ್ನು ಮತ್ತೊಮ್ಮೆ ಬಯಲಿಗೆಳೆದಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಟೀಕಿಸಿದ್ದಾರೆ.
ರಾಜ್ಯದ ಜನಸಂಖ್ಯೆಯ ಅರ್ಧ ಭಾಗ ಇರುವ ಮಹಿಳೆಯರಿಗೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡದಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಹಿಳಾ ಸಬಲೀಕರಣದ ಬಗ್ಗೆ ವೇದಿಕೆಗಳಲ್ಲಿ ಭಾಷಣ ಮಾಡುವ ಕಾಂಗ್ರೆಸ್, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರೆ ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ, ವಾಲ್ಮೀಕಿ ನಿಗಮ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿರುವುದು ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ನೀಡುತ್ತಿರುವ ರಾಜಕೀಯ ಆಶ್ರಯದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಉಷಾ ಆರೋಪಿಸಿದರು.
ಜನರ ತೆರಿಗೆ ಹಣದ ದುರುಪಯೋಗದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿರುವಾಗ ಇಂತಹ ನಿರ್ಧಾರ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ತೀಕ್ಷ್ಣವಾಗಿ ಟೀಕಿಸಿದರು.
ರಾಜ್ಯದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಗಳಾದ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಧ್ಯಕ್ಷ ಹಾಗೂ ಸಭಾಪತಿ ಹುದ್ದೆಗಳಿಗೂ ಚುನಾಯಿತ ಸದಸ್ಯರ ಅಭಿಪ್ರಾಯಕ್ಕಿಂತ ಹೈಕಮಾಂಡ್ ಆದೇಶವೇ ಅಂತಿಮವಾಗಿರುವುದುದುರಂತ, ಇದು ಕರ್ನಾಟಕ ವಿಧಾನಮಂಡಲದ ಸ್ವಾಯತ್ತತೆ, ಘನತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಗುಡುಗಿದರು.
ಮಹಿಳೆಯರನ್ನು ಕಡೆಗಣಿಸಿ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಬಹುಮಾನ ನೀಡಿ, ವಿಧಾನಮಂಡಲವನ್ನೇ ಹೈಕಮಾಂಡ್ ಕೈಗೊಂಬೆಯನ್ನಾಗಿಸುವ ಕಾಂಗ್ರೆಸ್ ಸಂಸ್ಕೃತಿಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದ ಜನರು ಈ ಅಹಂಕಾರ ಮತ್ತು ದ್ವಂದ್ವ ನೀತಿಗೆ ಪ್ರಜಾಪ್ರಭುತ್ವದ ಮೂಲಕವೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಉಷಾ ಮೋಹನ್ ಎಚ್ಚರಿಸಿದರು.
