ಮೈಸೂರು: ಮೈಸೂರಿನ ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಎನ್ಸಿಸಿ ಘಟಕವು ಕಾಲೇಜು ಆವರಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ದೇಶಭಕ್ತಿಯೊಂದಿಗೆ ಆಚರಿಸಿತು.
ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಿ, ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆಎಸ್ಎಸ್ಎಸ್ಟಿಯು, ಎಸ್ಜೆಸಿಇ ಕ್ಯಾಂಪಸ್ನಲ್ಲಿ ಎಸ್ಟೇಟ್ ಅಧಿಕಾರಿಯಾದ ಹಾಗೂ
ನಿವೃತ್ತ ಸೇನಾ ಯೋಧರಾದ ಸುಬೇದಾರ್ ರಾಜು ಕೆ ಅವರು ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಮಹತ್ವ, ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ತ್ಯಾಗಗಳನ್ನು ವಿವರಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಎನ್ಸಿಸಿಯ ಪ್ರಮುಖ ಪಾತ್ರವಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ನಾಯಕತ್ವ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕೆಡೆಟ್ಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಂಶುಪಾಲೆ ಮೀನಾಕ್ಷಿ ವಿ ಅವರು ಏಕತೆ, ಶಿಸ್ತು, ದೇಶಭಕ್ತಿ ಮತ್ತು ಸಮುದಾಯ ಸೇವೆಯ ಮಹತ್ವ ತಿಳಿಸಿ ವಿದ್ಯಾರ್ಥಿಗಳು ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ವೈಶಾಲಿ ಬಿ.ಸಿ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತ್ಯಾಗ ಮತ್ತು ಎನ್ಸಿಸಿ ಕೆಡೆಟ್ಗಳ ಪಾತ್ರವನ್ನು ವಿವರಿಸಿದರು.
ಭಾರತೀಯ ಸಶಸ್ತ್ರ ಪಡೆಗಳ ವೀರ ಸೈನಿಕರ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಬಿಂಬಿಸುವ ದೇಶಭಕ್ತಿ ಗೀತೆಗಳು ಮತ್ತು ನೃತ್ಯ ಪ್ರದರ್ಶನಗಳನ್ನು ಎನ್ಸಿಸಿ ಕೆಡೆಟ್ಗಳು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಅಭ್ಯಾಸ ವಿಭಾಗದ ಮುಖ್ಯಸ್ಥೆ ಸವಿತಾ ಎಂ, ಎನ್ಸಿಸಿ ಸಂಯೋಜಕಿ ವೇದಿತಾ ಎಚ್ಯು, ಎನ್ಸಿಸಿ ಕೆಡೆಟ್ಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
