ಬೆಂಗಳೂರು: ಅಧಿಕಾರ, ಸಚಿವ ಸ್ಥಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಹೋಗಿ. ಪಕ್ಷ, ಹೋರಾಟ, ವರಿಷ್ಠರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜೊತೆ ಬನ್ನಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ನೂತನ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ನಾನು ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ವರಿಷ್ಠರ ಬಳಿ ಹೋಗಿ ಯಾವತ್ತೂ ಸಚಿವ ಸ್ಥಾನ ಬೇಕು ಅಂತ ಕೇಳಿಲ್ಲ, ನಾನು ಅಧಿಕಾರಕ್ಕಾಗಿ ಪಕ್ಷದಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷದ ಸಿಪಾಯಿ. ನಮ್ಮ ಹಿರಿಯರ ಆದರ್ಶ ಪಾಲಿಸಿಕೊಂಡು ಜವಾಬ್ದಾರಿ ನಿರ್ವಹಿಸುತ್ತೇನೆ ಎಂಬ ನಂಬಿಕೆಯಿಂದ ಜವಾಬ್ದಾರಿ ಹೆಗಲೇರಿಸಿದ್ದಾರೆ,ಅದನ್ನು ನಿಭಾಯಿಸುತ್ತೇನೆ ಎಂದು ಕಡಕ್ ಆಗಿ ಹೇಳಿದರು.
ನಮ್ಮಲ್ಲಿ ಯಾವುದೇ ಬಣ ಇಲ್ಲ.ಇರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಬಿ.ಕೆ ಹರಿಪ್ರಸಾದ್ ತಿಳಿಸಿದರು.
