ಮೈಸೂರು: ಕನ್ನಡ ರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನಗರದ ಗೋಕುಲಂನಲ್ಲಿ ವಿದೇಶಿಯರು ಹಾಗೂ ನೆರೆ ರಾಜ್ಯಗಳ ಟೆಕ್ಕಿಗಳಿಗೆ ಕನ್ನಡ ಬಾವುಟ ವಿತರಿಸಿ ಕನ್ನಡ ಭಾಷೆ, ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ವಿದೇಶಿಯರು ಹಾಗೂ ನೆರೆ ರಾಜ್ಯದ ಟೆಕ್ಕಿಗಳೊಂದಿಗೆ ಸಾಮೂಹಿಕವಾಗಿ ಕರ್ನಾಟಕದ ನಾಡಗೀತೆಯನ್ನು ಹಾಡುವ ಮೂಲಕ ಕನ್ನಡಾಭಿಮಾನ ಮೆರೆದರು. ಅಲ್ಲದೆ ಕರ್ನಾಟಕದ ನೆಲ, ಜಲ, ಕಲೆ, ಸಾಹಿತ್ಯ ಹಾಗೂ ಶ್ರೀಮಂತ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಕನ್ನಡಿಗರಷ್ಟೇ ಅಲ್ಲದೆ, ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿ, ಕನ್ನಡ ಕಲಿಯಲು ಹಾಗೂ ಬಳಸಲು ಮುಂದಾಗಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಯಿತು.
ಕಾರ್ಯಕ್ರಮದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಜಯಸಿಂಹ, ಶ್ರೀಧರ್, ಗಗನ್ ಗೌಡ, ಅಮಿತ್, ರಾಜೇಶ್, ಸಚಿನ್ ನಾಯಕ್ ಸೇರಿದಂತೆ ಹಲವಾರು ಅಭಿಮಾನಿಗಳು ಹಾಜರಿದ್ದರು.
