ಚಾಮರಾಜನಗರ, ನ.1: ಕನ್ನಡ ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಶಾಸ್ತ್ರೀಯ ಭಾಷೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಬಳಿಕ 71ನೇ ಕರ್ನಾಟಕ ರಾಜ್ಯೋತ್ಸವದ ಸಂದೇಶ ನೀಡಿ ಅವರು ಮಾತನಾಡಿದರು.
ಪಂಪನ ವಿಕ್ರಮಾರ್ಜುನ ವಿಜಯದಿಂದ 12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿಯವರ ವಚನ ಕ್ರಾಂತಿ, ಕನಕದಾಸ, ಪುರಂದರ ದಾಸರ ಭಕ್ತಿ ಚಳುವಳಿ ಹಾಗೂ ಆಧುನಿಕ ಕನ್ನಡ ಕಾವ್ಯಯುಗದಲ್ಲಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಸೇರಿದಂತೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇಡೀ ದೇಶದ ಏಕೈಕ ಭಾಷೆ ನಮ್ಮ ಕನ್ನಡ ಭಾಷೆ ಎಂಬ ಹೆಗ್ಗಳಿಗೆ ನಮ್ಮ ಕನ್ನಡಿಗರದ್ದಾಗಿದೆ ಎಂದು ಬಣ್ಣಿಸಿದರು.
ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬ ರಾಷ್ಟ್ರಕವಿ ಕುವೆಂಪು ಅವರ ಆಶಯ ವಿಶ್ವಮಾನ್ಯವಾಗಿದೆ. ಕನ್ನಡದ ಭಾಷಾಭಿಮಾನ ನೆನೆಯುವಾಗ ನಮಗೆ ಜಿ. ಪಿ. ರಾಜರತ್ನಂ ಅವರು ನೆನಪಾಗುತ್ತಾರೆ. ಕನ್ನಡದ ಮೇಲಿನ ಪ್ರೀತಿಯನ್ನು ಅತ್ಯಂತ ದಿಟ್ಟತನದಿಂದ ಸಾರಿದವರು. ಅವರ ಸಾಹಿತ್ಯ ಚಳವಳಿ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ರಕ್ತವನ್ನು ಕುದಿಸುತ್ತವೆ. ಐತಿಹಾಸಿಕ ಕರ್ನಾಟಕ ಏಕೀಕರಣದ ಹಿಂದೆ ಆಲೂರು ವೆಂಕಟರಾಯರು, ಡೆಪ್ಯುಟಿ ಚನ್ನಬಸಪ್ಪ, ಅನಕೃ, ಎಂ. ಪಿ. ಪ್ರಕಾಶ್ ಸೇರಿದಂತೆ ಕೋಟ್ಯಂತರ ಕನ್ನಡಿಗರ ಹೋರಾಟ, ತ್ಯಾಗ, ಬಲಿದಾನವಿದೆ. ಆ ಎಲ್ಲಾ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನಮ್ಮ ಚಾಮರಾಜನಗರ ಜಿಲ್ಲೆಯು ಪ್ರಕೃತಿಯ ತವರೂರು. ಮಲೈ ಮಹದೇಶ್ವರ, ಬಿಳಿಗಿರಿರಂಗ, ಹಿಮವದ್ ಗೋಪಾಲಸ್ವಾಮಿಯವರ ಆಧ್ಯಾತ್ಮಿಕ ಶಕ್ತಿ ನಮ್ಮ ಜಿಲ್ಲೆಯನ್ನು ಕಾಯುತ್ತಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ಮತ್ತು ಕಪಿಲಾ ನದಿಗಳ ಹರಿವು ನಮ್ಮ ರೈತರ ಜೀವನಾಡಿಯಾಗಿದೆ. ಚಾಮರಾಜನಗರ ಕೇವಲ ಪ್ರಕೃತಿ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ, ಇಡೀ ಕರ್ನಾಟಕದ ಕಣ್ಮಣಿಯಾಗಿ ಕೋಟ್ಯಂತರ ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಆಳಿದ ವರನಟ ಡಾ ರಾಜ್ಕುಮಾರ್ ಅವರು ಬೆಳ್ಳಿತೆರೆ ಮಾತ್ರವಲ್ಲದೆ ನಿಜ ಜೀವನದ ‘ಗೋಕಾಕ್ ಚಳವಳಿ’ಯ ಮುಂಚೂಣಿಯಲ್ಲಿ ನಿಂತು ಕನ್ನಡ ನಾಡು ನುಡಿಯ ರಕ್ಷಣೆಗೆ ಧುಮುಕಿದರು ಅವರು ನಮ್ಮ ನೆಲದವರು. ಅವರ ಸರಳತೆ, ಸಾಂಸ್ಕೃತಿಕ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ. ಜಿಲ್ಲೆಯ ಶೇ. 90ಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಯಶಸ್ವಿಯಾಗಿ ತಲುಪಿದೆ. ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ಬಂದಿದೆ. ಜಿಲ್ಲೆಯ ರೈತರ ಹಿತರಕ್ಷಣೆಗಾಗಿ ಕೆರೆ ತುಂಬಿಸುವ ಯೋಜನೆಗಳು ಚುರುಕಿನಿಂದ ಸಾಗುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾರ್ವಜನಿಕ ಶಾಲೆಗಳ ಮೂಲಸೌಕರ್ಯಾಭಿವೃದ್ಧಿ, ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಧುನೀಕರಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಕೃತಿಗೆ ಧಕ್ಕೆಯಾಗದಂತೆ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತಿದೆ. ರಾಜ್ಯ ಸರ್ಕಾರವು ರೈತರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿನ ಖರೀದಿ ದರದಲ್ಲಿ ರೂ.8.00 ರಷ್ಟು ಹೆಚ್ಚಳ ಮಾಡಿದ್ದು ಹೈನುಗಾರಿಕೆಯನ್ನು ರೈತರಿಗೆ ಸುಸ್ಥಿರ ಆದಾಯದ ಮೂಲವನ್ನಾಗಿ ರೂಪಿಸಲು ಸಹಕಾರಿಯಾಗಿದೆ. ರಾಜ್ಯ ಸರ್ಕಾರವು ನಾಡಿನ ಅನ್ನದಾತರ ಹಿತಾಸಕ್ತಿ ಮತ್ತು ಕಲ್ಯಾಣಕ್ಕೆ ಸದಾ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಯುವ ಪೀಳಿಗೆಯು ಕಂಪ್ಯೂಟರ್, ಮೊಬೈಲ್ ಹಾಗೂ ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ಕನ್ನಡವನ್ನು ಬಳಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣವೂ ಕನ್ನಡದಲ್ಲೇ ಲಭ್ಯವಾಗುವಂತಾಗಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ಶೇಕಡಾ 100 ರಷ್ಟು ಆಡಳಿತ ಭಾಷೆ ಅನುಷ್ಠಾನಕ್ಕೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕ ಅಹವಾಲುಗಳನ್ನು ಕನ್ನಡದಲ್ಲೇ ಪರಿಹರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕನ್ನಡ ಕೇವಲ ನವೆಂಬರ್ ತಿಂಗಳ ಆಚರಣೆಯಾಗದೆ ನಮ್ಮ ದಿನನಿತ್ಯದ ಬದುಕಾಗಲಿ. ಬನ್ನಿ ನಾವೆಲ್ಲರೂ ಸೇರಿ ಚಾಮರಾಜನಗರವನ್ನು ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಕರೆ ನೀಡಿದರು.
ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಕೃತಿ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ. ಶೃತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
