ಬೆಂಗಳೂರು,ನ.1: ಮಾಜಿ ಮುಖ್ಯಮಂತ್ರಿ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ತನಿಖೆಯ ಬಗ್ಗೆ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಜಾಲಹಳ್ಳಿಯ ಹೆಚ್ಎಂಟಿ ಆಟದ ಮೈದಾನದಲ್ಲಿ ನಡೆದ ಹೆಚ್ ಎಂ ಟಿ ಕನ್ನಡಿಗ ನೂತನ ಸರಣಿಯ ಕೈಗಡಿಯಾರಗಳ ಲೋಕಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸೋಮವಾರ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ. ಸ್ಟಿಂಗ್ ಆಪರೇಷನ್ ತಿರುಗುಬಾಣ ಯಾರಿಗೆ ಆಗುತ್ತದೆ ಎಂದು ಹೇಳುತ್ತೇನೆ. ನಮ್ಮ ಬಗ್ಗೆ ಯಾರು ಕೂಡ ಗಾಬರಿ ಆಗಬೇಕಿಲ್ಲ. ಯಾರದು ಪೊಲೀಸ್ ಕಮೀಷನರ್? ಅವರು ಪೊಲೀಸ್ ಕಮೀಷನರಾ? ಹೆಡ್ ಕ್ಲರ್ಕ್ ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಆಯುಕ್ತರು ತಮ್ಮ ಹುದ್ದೆ ಉಳಿಸಿಕೊಳ್ಳಲು ಏನೆಲ್ಲಾ ಮಾಡ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಇಲಾಖೆಯ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನಾನು ಹೇಳುತ್ತೇನೆ. ಈ ಪ್ರಕರಣದ ತಿರುಗುಬಾಣ ಯಾರಿಗೆ ಆಗುತ್ತದೆ ಎಂಬುದನ್ನ ಬಹಿರಂಗ ಮಾಡುತ್ತೇನೆ. ಸೋಮವಾರ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದು, ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದು ನನಗೆ ತಿಳಿದಿದೆ. ಈ ಸರ್ಕಾರದ ಆಡಳಿತ ಯಾವ ರೀತಿ ಇದೆ ನಡೆಯುತ್ತಿದೆ ಎಂಬುದನ್ನು ಹೇಳುತ್ತೇನೆ. ಈ ಕುಮಾರಸ್ವಾಮಿಯನ್ನ ಈ ಸರ್ಕಾರ, ಈ ಅಧಿಕಾರಿಗಳು ಟಚ್ ಮಾಡೋಕೆ ಆಗಲ್ಲ, ಅಷ್ಟು ಸುಲಭವಾಗಿ ಇವರು ಎದುರಿಸಲು ಆಗಲ್ಲ ಎಂದು ಹೆಚ್ ಡಿ ಕೆ ಎಚ್ಚರಿಕೆ ನೀಡಿದರು.
ಈ ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡ್ತಿದೆ ಎಂಬುದನ್ನು ಬಲ್ಲೆ. ಸಿದ್ದರಾಮಯ್ಯ ಅವರು ಯಾಕೆ ಸ್ಟೇ ತಗೊಂಡಿದ್ದಾರೆ? ಯತೀಂದ್ರ ಸಿದ್ದರಾಮಯ್ಯ ನಮ್ಮ ಪಕ್ಷದವರೇ ಸ್ಟಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟ್ರೈಲರ್ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು; ಇದೆಲ್ಲಾ ಯಾವ ಟ್ರೈಲರ್, ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾಳೆ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
