ಮೈಸೂರು,ನ.1: ನಗರದ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೊದಲಿಗೆ ಕನ್ನಡಾಂಬೆ ಶ್ರೀ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು.
ನಂತರ ಸಮಾಜದ ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರಕಾರ್ಮಿಕ ಬಂಧುಗಳಾದ ಚೆಲುವರಾಜು ಹಾಗೂ ಸುಶೀಲಮ್ಮ ಅವರು ಕನ್ನಡ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್ ಅವರು ಮಾತನಾಡಿ,ನಮ್ಮ ಸಮಾಜದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರಿಂದ ಧ್ವಜಾರೋಹಣ ನೆರವೇರಿಸಿರುವುದು ನಮಗೆ ಹೆಮ್ಮೆ ತಂದಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆ, ನೆಲ-ಜಲದ ಉಳಿವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ 2026ರ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಗಗನ್ ಗೌಡ ಅವರಿಗೆ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.
ನಂತರ ಸಾರ್ವಜನಿಕರಿಗೆ ಹಾಗೂ ಕನ್ನಡ ಪ್ರೇಮಿಗಳಿಗೆ ಸಿಹಿ ವಿತರಣೆ ಮಾಡಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀಧರ್, ನಾರಾಯಣ್, ಅಂಬಳೆ ಶಿವಣ್ಣ, ಜೀವಧಾರ ಗಿರೀಶ್, ಅಜಯ್ ಶಾಸ್ತ್ರಿ, ವಿಕ್ರಂ, ಮರಿಸ್ವಾಮಿ, ಪ್ರಭುಶಂಕರ್, ಬಸವರಾಜು, ಚಂದ್ರಶೇಖರ್, ಮಹೇಶ್, ಸಂತೋಷ್, ಭರತ್, ಸುರೇಂದರ್, ರವಿ, ಸುರೇಶ್, ಹವನ್, ಚಿಕ್ಕಣ್ಣ, ಅರವಿಂದ್, ನಾಗೇಂದ್ರ, ಮೂರ್ತಿ, ಮೋಹನ್, ಪವನ್, ಕೌಶಿಕ್, ಚೇತನ್, ಪ್ರಜ್ವಲ್, ರಾಜೇಂದ್ರ ಸೇರಿದಂತೆ ಅನೇಕ ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು.
