ಮೈಸೂರು,ನ.1: ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ಪೀಪಲ್ಸ್ ಗ್ಲೋಬಲ್ ರೂರಲ್ ಸರ್ವಿಸಸ್ ಸೊಸೈಟಿ ಸಂಸ್ಥೆಯು ಮೈಸೂರಿನ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಆಶ್ರಮದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಶ್ರಮದ ತಾಯಂದಿರ ಸಮ್ಮುಖದಲ್ಲಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಕನ್ನಡಾಂಬೆಯ ಆಶೀರ್ವಾದವನ್ನು ಪಡೆಯಲಾಯಿತು. ಕನ್ನಡ ನಾಡಿನ ಹಿರಿಮೆ, ಗರಿಮೆ, ಇತಿಹಾಸ, ಕನ್ನಡ ಭಾಷೆಯ ಶ್ರೀಮಂತಿಕೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಮಹತ್ವವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ರಾಜ್ಯ ಸಹ-ಕಾರ್ಯದರ್ಶಿ ರಕ್ತದಾನಿ ಮಂಜು ಅವರು, ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡಿಗರಾದ ನಾವು ನಮ್ಮ ತಾಯ್ನುಡಿಯನ್ನು ಪ್ರೀತಿಸುವುದರ ಜೊತೆಗೆ, ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸುವ ಮೂಲಕ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷಪೂರ್ತಿ ಕನ್ನಡದ ಗೌರವವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ನಿರಾಶ್ರಿತರು ಹಾಗೂ ವೃದ್ಧ ತಾಯಂದಿರೊಂದಿಗೆ ಹಬ್ಬಗಳನ್ನು ಆಚರಿಸುವುದರಿಂದ ಅವರಲ್ಲಿ ಸಂತೋಷ ಮತ್ತು ಆತ್ಮೀಯತೆಯ ಭಾವನೆ ಮೂಡುತ್ತದೆ. ಇಂತಹ ಸೇವಾ ಕಾರ್ಯಕ್ರಮಗಳ ಮೂಲಕ ಮಾನವೀಯತೆ, ಪ್ರೀತಿ, ಸಹಬಾಳ್ವೆ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ರಕ್ತದಾನಿ ಮಂಜು ತಿಳಿಸಿದರು.
ನಂತರ ಆಶ್ರಮದ ತಾಯಂದಿರಿಗೆ ಸಿಹಿ ವಿತರಿಸಿ, ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಯಾದವ್ ಹರೀಶ್, ಖಜಾಂಚಿ ಮಂಜುಳಾ, ರಾಜ್ಯ ಸಹ-ಕಾರ್ಯದರ್ಶಿ ರಕ್ತದಾನಿ ಮಂಜು, ಆರ್ ಡಿ ಐ ಮಾಹಿತಿ ಪತ್ರಿಕೆಯ ಜಿಲ್ಲಾ ವರದಿಗಾರರಾದ ಜಾನ್ಸಿ, ಸಂಸ್ಥೆಯ ಸಹಾಯಕಿ ಕೋಮಲ, ರಾಜೇಶ್ವರಿ ಯಾದವ್ ಹರೀಶ್, ಆಶ್ರಮದ ತಾಯಂದಿರು ಉಪಸ್ಥಿತರಿದ್ದರು.
