ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಬರೆ ಎಳೆದಿದೆ. ನಂದಿನಿ ಹಾಲಿನ ದರವನ್ನು ಲೀಟರ್ಗೆ 8 ರೂಪಾಯಿ ಹೆಚ್ಚು ಮಾಡಲು ನಿರ್ಧರಿಸಿರುವುದು ಅತ್ಯಂತ ಖಂಡನೀಯ ಎಂದು ಯುವ ಭಾರತ ಸಂಘಟನೆಯ ಸಂಚಾಲಕ ಜೋಗಿ ಮಂಜು ಕಿಡಿಕಾರಿದ್ದಾರೆ.
ಚುನಾವಣೆಗೂ ಮುನ್ನ ಬಡವರ ಸರ್ಕಾರ ಎಂದು ಹೇಳಿಕೊಂಡ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದರ ಬೆಲೆ ಏರಿಕೆ ಮಾಡುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿದ್ಯುತ್ ದರ, ಸ್ಟ್ಯಾಂಪ್ ಡ್ಯೂಟಿ, ಪೆಟ್ರೋಲ್-ಡೀಸೆಲ್, ಬಸ್ ಟಿಕೆಟ್, ಮತ್ತು ಈಗ ಹಾಲಿನ ದರ ಏರಿಕೆ ಮಾಡುತ್ತಿದೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ
ಹಾಲು ಬಡವರು, ಮಕ್ಕಳು, ವೃದ್ಧರು ಪ್ರತಿದಿನ ಬಳಸುವ ಅಮೃತ ಸಮಾನ. ಇದರ ದರ ಹೆಚ್ಚಳದಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ತಿಂಗಳ ಬಜೆಟ್ ಸಂಪೂರ್ಣ ಹದಗೆಡಲಿದೆ.
ರೈತರಿಗೆ ಕೊಡುತ್ತೇವೆ ಎಂಬ ನೆಪದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಕೆಲಸ ಈ ಸರ್ಕಾರ ಮಾಡುತ್ತಿದೆ. ನಿಜವಾಗಿಯೂ ರೈತರಿಗೆ ಸಹಾಯ ಮಾಡುವ ಉದ್ದೇಶವಿದ್ದರೆ, ಸರ್ಕಾರ ತನ್ನ ಖಜಾನೆಯಿಂದ ಸಹಾಯಧನ ನೀಡಬೇಕು, ಜನರ ಮೇಲೆ ಹೊರೆ ಹಾಕಬಾರದು ಎಂದು ಜೋಗಿ ಮಂಜು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ಒಂದು ಕೈಯಲ್ಲಿ ಕೊಟ್ಟು, ದರ ಏರಿಕೆ ಮೂಲಕ ಇನ್ನೊಂದು ಕೈಯಲ್ಲಿ ದುಪ್ಪಟ್ಟು ಹಣವನ್ನು ಕಿತ್ತುಕೊಳ್ಳುವ ಎಟಿಎಂ ಸರ್ಕಾರ ದ ನೀತಿಯನ್ನು ಯುವ ಭಾರತ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಕೂಡಲೇ ಈ ದರ ಏರಿಕೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ಯುವ ಭಾರತ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
