ಮೈಸೂರು: ಮೈಸೂರು ಅರಮನೆ ಸರ್ಕಾರದ ಆಸ್ತಿ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಸಮರ್ಥಿಸಿದ್ದಾರೆ.
ಅರಮನೆ ಮತ್ತು ಅಂಬಾರಿ ವಿಚಾರದಲ್ಲಿ ಯತೀಂದ್ರ ಅವರು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಅರಮನೆ ಸ್ವಾಧೀನ ಕಾಯ್ದೆಯ ಆಧಾರದಲ್ಲಿಯೇ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಯತೀಂದ್ರ ಅವರು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದಾರೆ. ತಪ್ಪು ಮಾಡಿದ್ದರೆ ಕ್ಷಮೆ ಕೇಳಬಹುದಿತ್ತು. ಆದರೆ, ಅವರು ತಪ್ಪು ಮಾಡಿಲ್ಲ,ಆದ್ದರಿಂದ ಕ್ಷಮೆ ಕೇಳುವ ಅಗತ್ಯ ಇಲ್ಲ ಎಂದು ಸುಬ್ರಹ್ಮಣ್ಯ ತಿಳಿಸಿದರು.
1950ರಲ್ಲಿ ಆಗಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.ಆ ಒಪ್ಪಂದದ ಪ್ರಕಾರ, ತಮ್ಮ ಸಾರ್ವಭೌಮ ಅಧಿಕಾರವನ್ನು ಭಾರತ ಸರ್ಕಾರಕ್ಕೆ ಬಿಟ್ಟುಕೊಟ್ಟು ಮೈಸೂರು ಸಂಸ್ಥಾನವನ್ನು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಸಿದ್ಧಪಡಿಸಲಾದ ಆಸ್ತಿ ಪಟ್ಟಿಯಲ್ಲಿ ಮೈಸೂರು ಅರಮನೆ, ಅದರ ಸುತ್ತಮುತ್ತಲಿನ ಜಾಗ ಹಾಗೂ ಇತರ ಕೆಲವು ಆಸ್ತಿಗಳನ್ನು ಮಹಾರಾಜರ ಖಾಸಗಿ ಆಸ್ತಿಗಳೆಂದು ಗುರುತಿಸಲಾಗಿತ್ತು.
ನಂತರ, 1976ರಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅರಮನೆಯ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತು. 1998ರಲ್ಲಿ ಕರ್ನಾಟಕ ಸರ್ಕಾರವು ‘ಮೈಸೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ’ ಜಾರಿಗೆ ತಂದು, ಅರಮನೆ ಹಾಗೂ ಅದರ ಸುತ್ತಮುತ್ತಲಿನ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೈಗೊಂಡಿತು ಎಂದು ಸುಬ್ರಮಣ್ಯ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಮನೆ ವಿಚಾರವನ್ನು ಸಾರ್ವಜನಿಕ ಆಸ್ತಿಯ ದೃಷ್ಟಿಕೋನದಿಂದ ನೋಡಬೇಕಿದೆ. ಅಂಬಾರಿ ನೀಡುವ ಸಂದರ್ಭದಲ್ಲಿಯೂ ಸರ್ಕಾರ ರಾಜಮನೆತನಕ್ಕೆ ಗೌರವಧನ ನೀಡುತ್ತದೆ. ದಸರಾ ಆಚರಣೆ ವಿಚಾರದಲ್ಲಿ ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ ಅಂತಾ ಸಿಎಂ ಹೇಳಿದ್ದಾರೆ. ಆದರೆ, ಬಿಜೆಪಿಯವರು ಅನಗತ್ಯ ಪ್ರತಿಭಟನೆ ನಡೆಸುವ ಮೂಲಕ ವಿಚಾರದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಈ ಬಗ್ಗೆ ಮಾತನಾಡದಿದ್ದರೂ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ವಿವಾದವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕ್ಲೀನ್ಚಿಟ್ ನೀಡಿರುವ ವಿಚಾರದ ಕುರಿತು ಬಿ. ಸುಬ್ರಹ್ಮಣ್ಯ ಪ್ರತಿಕ್ರಿಯಿಸಿದ್ದು,
ಸ್ಟಿಂಗ್ ಆಪರೇಷನ್ ಕಟ್ಟುಕಥೆ ಎಂಬುದು ತನಿಖೆಯಿಂದ ಸಾಬೀತಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮತ್ತು ಸೈಬರ್ ಕ್ರೈಂ ಪೊಲೀಸರು ತನಿಖೆಯನ್ನು ಇಲ್ಲಿಗೇ ನಿಲ್ಲಿಸಬಾರದು. ವಿಡಿಯೊ ಸೃಷ್ಟಿಸಿ ಸಿದ್ದರಾಮಯ್ಯ ಅವರ ಘನತೆಗೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೇಂದ್ರ ಸಚಿವರ ನಿವಾಸದಲ್ಲಿ ಸಿಸಿಬಿ ಮತ್ತು ಸೈಬರ್ ಕ್ರೈಂ ಪೊಲೀಸರು ಮಹಜರು ನಡೆಸಿರುವುದು ಕುತೂಹಲಕಾರಿ ಸಂಗತಿ. ಆದರೂ, ಕೇಂದ್ರದ ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ದೊರೆತ ಮಾತ್ರಕ್ಕೆ ಪ್ರಕರಣವನ್ನು ಮುಕ್ತಾಯಗೊಳಿಸಬಾರದು. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿದವರನ್ನು ಪತ್ತೆಹಚ್ಚಿ, ಕಾನೂನು ಕ್ರಮ ಜರುಗಿಸಬೇಕು ಎಂದು ಬಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
