ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಗರದಾದ್ಯಂತ ಮಾಡಲಾಗಿರುವ ಆಕರ್ಷಕ ದೀಪಾಲಂಕಾರವನ್ನು ನವೆಂಬರ್ 1ರ ಕನ್ನಡ ರಾಜ್ಯೋತ್ಸವದವರೆಗೂ ಮುಂದುವರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಂ ಅಯ್ಯಂಗಾರ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದಸರಾ ಮುಗಿದಿದ್ದರೂ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಪ್ರವಾಸಿಗರು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದಸರಾ ದೀಪಾಲಂಕಾರವನ್ನು ನಿಗದಿತ ಅವಧಿಗೂ ಮೀರಿ ಮುಂದುವರಿಸಿದರೆ ಪ್ರವಾಸಿಗರಿಗೆ ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಸವಿಯಲು ಮತ್ತಷ್ಟು ಅವಕಾಶ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಮೈಸೂರಿನ ವರ್ಣರಂಜಿತ ದೀಪಾಲಂಕಾರದ ನಡುವೆ ಆಚರಿಸುವ ಮೂಲಕ ಕನ್ನಡಿಗರ ಹಬ್ಬಕ್ಕೆ ವಿಶೇಷ ಮೆರುಗು ನೀಡಬೇಕು. ದಸರಾ ದೀಪಾಲಂಕಾರ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮ ಒಂದೇ ವೇದಿಕೆಯಲ್ಲಿ ಮೇಳೈಸುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿಕ್ರಂ ಅಯ್ಯಂಗಾರ್ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.
