ಹುಣಸೂರು: ಹುಣಸೂರು ತಾಲೂಕು ರಾಮಪಟ್ಟಣದಲ್ಲಿ ಶ್ರೀ ಮಹದೇಶ್ವರ ಮತ್ತು ಬೇಡರ ಕಣ್ಣಪ್ಪ ಜಾತ್ರಾ ಮಹೋತ್ಸವ ಕಳೆಗಟ್ಟಿದೆ.
ಲಕ್ಷ್ಮಣತೀರ್ಥ ನದಿಯ ದಡಕ್ಕೆ ಹೊಂದಿಕೊಂಡಂತೆ ದೇವಸ್ಥಾನ ಇದೆ, ಜೋರು ಮಳೆ ಬಂದು ಈ ನದಿ ತುಂಬಿ ಹರಿದರೆ ದೇವಾಲಯಕ್ಕೂ ನೀರು ನುಗ್ಗುತ್ತದೆ, ಆದರೆ ಈವರಿಗೆ ಯಾವುದೇ ಅನಾಹುತ ಸಂಭವಿಸದೆ ಇರುವುದು ವಿಶೇಷ.
ಮಂಗಳವಾರ ಮುಂಜಾನೆ ಸ್ವಾಮಿಗೆ ವಿವಿಧ ಅಭಿಷೇಕ ಮತ್ತು ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಈಗಾಗಲೇ ರಾಮಪಟ್ಟಣ ಗ್ರಾಮ,ಹಾಗೂ ಸುತ್ತಮುತ್ತಲ ಗ್ರಾಮಗಳು ಮತ್ತು ಹುಣಸೂರಿನಾದ್ಯಂತ ನೂರಾರು ಮಂದಿ ಜಾತ್ರೆಗೆ ಆಗಮಿಸಿದ್ದಾರೆ ಜೊತೆಗೆ ದನಗಳ ಜಾತ್ರೆಯೂ ಕಳೆಗಟ್ಟಿದೆ.
ಇಂದಿನಿಂದ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಈ ದೇವಾಲಯ ಹಳೆಯ ಕಾಲದ್ದು, ಹಿಂದೆ ಕೃಷ್ಣರಾಜ ಒಡೆಯರ್ ಅವರು ಈ ದೇವಸ್ಥಾನವನ್ನು ಸ್ಥಾಪಿಸಿದರೆಂದು ಊರಿನ ಹಿರಿಯರು ಹೇಳುತ್ತಾರೆ, ಇಲ್ಲಿ ಲಿಂಗ ಕೂಡ ಇದೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ದೇವಾಲಯದ ಬಳಿ ಕೊಂಡ ಸಿದ್ದಪಡಿಸಿದ್ದು,ನೂರಾರು ಮಂದಿ ಕೊಂಡ ಹಾಯ್ದು ಭಕ್ತಿ ಪ್ರದರ್ಶಿಸಿ ಪುನೀತರಾದರು.
ಸಂಜೆ ನಾಟಕ ಕೂಡಾ ಏರ್ಪಪಡಿಸಲಾಗಿದೆ.ನಾಳೆ ಅಂದರೆ ಬುಧವಾರ ರಾತ್ರಿ ನದಿಯಲ್ಲಿ ಶ್ರೀಸ್ವಾಮಿಗೆ ಅದ್ದೂರಿ ತೆಪ್ಪೋತ್ಸವ ನೆರವೇರಲಿದೆ.
ರಾಮ ಪಟ್ಟಣದ ಯಜಮಾನರು ಗ್ರಾಮದ ಮುಖಂಡರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮುಖಂಡರು ಎಲ್ಲರೂ ಒಟ್ಟಾಗಿ ಸೇರಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಮಹಾದೇಶ್ವರ ಮತ್ತು ಬೇಡರ ಕಣ್ಣಪ್ಪ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ.
ಉತ್ತಮ ರಾಸುಗಳಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ಬಹುಮಾನವನ್ನು ನೀಡಲಾಗುತ್ತದೆ.
ಹುಣಸೂರಿನ ಮತ್ತ ಸುತ್ತಮುತ್ತಲ ಗ್ರಾಮಗಳ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಚೆಲುವರಾಜು ಅವರು ಮನವಿ ಮಾಡಿದ್ದಾರೆ.

