
ಮೈಸೂರು: ಬರ್ತ್ ಡೇ ಅಂದ್ರೆ ಪಾರ್ಟಿ,
ಗುಂಡು, ತುಂಡು ಮೋಜು ಮಸ್ತಿಯಲ್ಲಿ ಮುಳುಗುವ ಇಂದಿನ ಯುವ ಪೀಳಿಗೆಗೆ ಮೈಸೂರಿನ ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಕಶ್ಯಪ್ ಮಾದರಿಯಾಗಿದ್ದಾರೆ.
ರಸ್ತೆ ಉಬ್ಬುಗಳಿಗೆ ಸ್ವಂತ ಹಣದಿಂದ ಖುದ್ದಾಗಿ ಕಸ ತೆಗೆದು,ಬಣ್ಣ ಬಳಿದು ಸರಳವಾಗಿ ಅರ್ಥಪೂರ್ಣವಾಗಿ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
ಕಶ್ಯಪ್ ಅವರ ಈ ಸಾಮಾಜಿಕ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.
ಕಳೆದ ವರ್ಷ ಶ್ರೀಕಾಂತ್ ಕಶ್ಯಪ್ ಅವರು ತಮ್ಮ ಬರ್ತ್ ಡೇ ದಿನ ಚಾಮುಂಡಿಬೆಟ್ಟಕ್ಕೆ ವಾಹನದಲ್ಲಿ ತೆರಳುವಾಗ ಚಾಮುಂಡಿಪುರಂ ವೃತ್ತದ ಬಳಿ ಇರುವ ಹಂಪ್ ನಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.
ಈ ವರ್ಷ ಅದರ ನೆನಪಿನಲ್ಲೇ ಮತ್ತೆ ಯಾರೂ ಹಂಪ್ಸ್ ಗೊತ್ತಿಲ್ಲದೆ ಬೀಳಬಾರದೆಂಬ ಕಾಳಜಿಯಿಂದ ತಮ್ಮ ಜನ್ಮ ದಿನಾಚರಣೆಯನ್ನು ಅದೇ ಹಂಪ್ ಗೆ ಬಣ್ಣ ಬಳಿದು ಜನರಿಗೆ ಉಪಯೋಗವಾಗುವಂತೆ ಮಾಡುವ ಮೂಲಕ ಅರ್ಥಪೂರ್ಣವಾಗಿ ತಮ್ಮ ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದಾರೆ.
ಜನ್ಮದಿನಾಚರಣೆಗಳಂದು ಮೋಜು ಮಸ್ತಿ ಮಾಡುವ ಬದಲು ಇಂತಹ ಉಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಕಾಂತ್ ಕಶ್ಯಪ್ ಇತರರಿಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಶ್ಯಪ್ ಅವರಿಗೆ ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ದೂರ ರಾಜಣ್ಣ, ಅಪೂರ್ವ ಸುರೇಶ್, ಜತ್ತಿ ಪ್ರಸಾದ್, ಸಂದೀಪ್ ಮತ್ತಿತರರು ಸಾಥ್ ನೀಡಿ,ಸ್ನೇಹಿತನ ಕಾರ್ಯದಲ್ಲಿ ಪಾಲ್ಗೊಂಡು ಸಹಕರಿಸಿ ಪ್ರೋತ್ಸಾಹಿಸಿದರು.
