ಮೈಸೂರು: ಮೈಸೂರು ಲಕ್ಷ್ಮೀಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್ ಬಿ.ಎಸ್. ಅವರು ವಿದ್ಯಾರ್ಥಿಗಳಿಗೆ ಮಾದಕ ವಸ್ತು ದುರ್ಬಳಕೆ ಕುರಿತು ಅರಿವು ಮೂಡಿಸಿದರು.
ಮಾದಕ ವಸ್ತು ದುರ್ಬಳಕೆ ಜಾಗೃತಿ ಹಾಗೂ ಕಾನೂನು ಸಹಾಯ ಮತ್ತು ದೂರು ಸಲ್ಲಿಕೆ ವ್ಯವಸ್ಥೆ ಕುರಿತು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ
ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನೆ ಘಟಕ, ವಿದ್ಯಾರ್ಥಿ ಕುಂದು ಕೊರತೆ ಸಮಿತಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರವಿಶಂಕರ್ ಬಿ.ಎಸ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಬಳಕೆಯ ಅಪಾಯಗಳ ಕುರಿತು ವಿವರಿಸಿದರು.
ಮಾದಕ ವಸ್ತುಗಳ ಬಳಕೆ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಕುಟುಂಬ ಜೀವನದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ತಿಳಿಸಿದರು.
ಮಾದಕ ವಸ್ತುಗಳ ಹೊಂದಿಕೆ, ಸಾಗಣೆ ಹಾಗೂ ಬಳಕೆ ಕಾನೂನುಬಾಹಿರವಾಗಿದ್ದು, ಇದಕ್ಕೆ ಕಠಿಣ ಶಿಕ್ಷೆಗಳು ವಿಧಿಸಲಾಗುತ್ತವೆ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿನಿಯರು ತಪ್ಪು ಸ್ನೇಹ ಬಳಗ ಮತ್ತು ಒತ್ತಡಗಳಿಗೆ ಒಳಗಾಗದೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದಲ್ಲದೆ, ಕಾನೂನು ಸಹಾಯದ ಮಹತ್ವ, ನಾಗರಿಕರ ಹಕ್ಕುಗಳು, ದೂರು ಸಲ್ಲಿಸುವ ವಿಧಾನಗಳು ಹಾಗೂ ಪೊಲೀಸ್ ಇಲಾಖೆಯ ಕಾರ್ಯಪದ್ದತಿಗಳ ಬಗ್ಗೆ ವಿವರಿಸಿದರು.
ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನುಗಳು, ತುರ್ತು ಸಹಾಯ ಪಡೆಯುವ ವಿಧಾನಗಳು ಹಾಗೂ ದೂರು ದಾಖಲಿಸುವ ಸರಿಯಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಧೈರ್ಯವಾಗಿ ಮತ್ತು ಕಾನೂನುಬದ್ಧವಾಗಿ ಮಂಡಿಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ಉಪನ್ಯಾಸದ ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿನಿಯರು ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ರಹಿಮಾನ್ ಎಂ. ಅವರು ವಹಿಸಿದ್ದರು.
ಅಂತಿಮ ಬಿ. ಎಸ್ಸಿ ವಿದ್ಯಾರ್ಥಿ ವರ್ಷಿಣಿ ಪ್ರಾರ್ಥಿಸಿದರೆ, ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿ ಸಂಚಾಲಕಿ ಡಾ. ಪ್ರೀತಿ ಎನ್ ತಲ್ಲೂರ್ ಸ್ವಾಗತಿಸಿದರು. ಡಾ. ವಿದ್ಯಾ ಕೆ ಅತಿಥಿಗಳನ್ನು ಪರಿಚಯಿಸಿದರು. ಡಾ. ಲಕ್ಷ್ಮೀ ಎಂ ಪಳೋಟಿ ವಂದಿಸಿದರು.
ಲಕ್ಷ್ಮಿಪುರಂ ಠಾಣೆ ಸಬ್ ಇನ್ಸ್ಪೆಕ್ಟರ್ ಶೇಕ್ ಫಿರೋಜ್,ವಿದ್ಯಾರ್ಥಿ ಕುಂದುಕೊರತೆ ಸಮಿತಿ ಸಂಚಾಲಾಕಿ ಡಾ. ಅಭಿನಂದಿನಿ ಐ. ಡಿ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರ ಡಾ. ನಂದಕುಮಾರ್ ವಿ,
ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
