ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿರುವ ಭೀಕರ ದಿಢೀರ್ ಪ್ರವಾಹದಿಂದಾಗಿ ಸಾಕಷ್ಟು ಸಾವು ನೋವು ಸಂಭವಿಸಿದೆ.ಗ್ರಾಮಗಳೇ ಕೊಚ್ವಿ ಹೋಗಿವೆ.
ನೇಪಾಳದ ರಾಜಧಾನಿ ಕಠ್ಮಂಡುವಿನ ಉತ್ತರ ಭಾಗದಲ್ಲಿರುವ ರಸುವಾ, ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಭೋಟೆ ಕೋಶಿ ನದಿಯ ಆರ್ಭಟಕ್ಕೆ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಇವರಲ್ಲಿ ಭಾರತದ 133 ಪ್ರಜೆಗಳು, 37 ಅನಿವಾಸಿ ಭಾರತೀಯರು ಸೇರಿದಂತೆ ಅಮೆರಿಕ, ಬ್ರಿಟನ್ ಮತ್ತು ಮಲೇಷ್ಯಾದ 291 ವಿದೇಶಿ ಪ್ರವಾಸಿಗರು ಸೇರಿದ್ದಾರೆ.
ಅಲ್ಲದೆ ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಯ 28ಕ್ಕೂ ಹೆಚ್ಚು ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ.
ನೇಪಾಳದ ವಿದೇಶಾಂಗ ಸಚಿವಾಲಯದ ಪ್ರಾಥಮಿಕ ವರದಿಗಳ ಪ್ರಕಾರ, ಟಿಬೆಟ್ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಭಾರಿ ಹಿಮಕುಸಿತಕ್ಕೂ ಕಾರಣವಾಗಿದೆ.
ಹಿಮಕುಸಿತದಿಂದಾಗಿ ಬೆಟ್ಟದ ಮಣ್ಣು ಮತ್ತು ಕಲ್ಲುಗಳು ನದಿಗೆ ಅಡ್ಡಲಾಗಿ ಬಿದ್ದು ಕೃತಕ ಸರೋವರ ಸೃಷ್ಟಿಯಾದರೆ, ಅಣೆಕಟ್ಟು ಒಡೆದಿದ್ದರಿಂದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಚಂಡಮಾರುತದ ವೇಗದಲ್ಲಿ ದಿಢೀರ್ ಪ್ರವಾಹ ನುಗ್ಗಿದೆ.
ಟಿಬೆಟ್ನ ಗೈರಾಂಗ್ ಬಂದರಿನಲ್ಲಿ ಜನರು ಮತ್ತು ಬಸ್ಗಳು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಸಿಸಿಟಿವಿ ದೃಶ್ಯಗಳು ಜಾಗತಿಕವಾಗಿ ವೈರಲ್ ಆಗಿವೆ.
ಪ್ರವಾಹದ ಭೀಕರತೆಗೆ ನೇಪಾಳದ ಪ್ರಮುಖ ಜಲವಿದ್ಯುತ್ ಯೋಜನೆಗಳು ಮತ್ತು ಸೋಲಾರ್ ಘಟಕಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಸುಮಾರು 430 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ನೇಪಾಳ ಆರ್ಮಿ ಮತ್ತು ಖಾಸಗಿ ಸಂಸ್ಥೆಗಳಿಗೆ ಸೇರಿದ 30ಕ್ಕೂ ಹೆಚ್ಚು ಹೆಲಿಕಾಪ್ಟರ್ಗಳು ಮನೆಗಳ ಮೇಲ್ಛಾವಣಿಯ ಮೇಲೆ ಸಿಲುಕಿರುವ ಜನರನ್ನು ರಕ್ಷಿಸುತ್ತಿವೆ.
ಭಾರತದ ಸಹಾಯ: ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರಿಗೆ ಧೈರ್ಯ ತುಂಬಿದ್ದು, ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ತುರ್ತು ರಕ್ಷಣಾ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತಿದ್ದಾರೆ.
