ಮೈಸೂರು: ಶಬರಿಮಲೆಗೆ ತೆರಳುತ್ತಿದ್ದ ಕನ್ನಡಿಗರ ವಾಹನದಲ್ಲಿದ್ದ ಕನ್ನಡ ಬಾವುಟ ತೆಗೆಯಲು ಒತ್ತಾಯಿಸಿ, ತಮಿಳುನಾಡಿನ ಕೆಲ ಗುಂಪು ಕನ್ನಡಿಗ ಚಾಲಕನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಚಾಮರಾಜನಗರ- ತಮಿಳುನಾಡು ಗಡಿ ಬಂದ್ ಗೆ ಕರೆ ನೀಡಿದ್ದನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಹಿಂಪಡೆದಿದ್ದಾರೆ.
ಇದೆ ಮಂಗಳವಾರ ಜ.20 ರಂದು ಚಾಮರಾಜನಗರ ದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಜೊತೆಗೂಡಿ ಪತ್ರಿಕಾ ಗೋಷ್ಠಿ ನಡೆಸಿ ಚಾಮರಾಜನಗರ ಮತ್ತು ತಮಿಳುನಾಡು ಗಡಿ ಬಂದ್ ಮಾಡುವ ದಿನಾಂಕವನ್ನು ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಈಗಾಗಲೇ ವಿವಿಧ ಕನ್ನಡಪರ ಸಂಘಟನೆಗಳ ಜೊತೆ ಚರ್ಚೆ ಕೂಡ ನಡೆಸಲಾಗಿತ್ತು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಆದರೆ ಸೋಮವಾರ ತಮಿಳುನಾಡು ಪೋಲಿಸರು ಕನ್ನಡ ಬಾವುಟಕ್ಕೆ ಅಪಮಾನ ಮಾಡಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದ ತಮಿಳು ಗೂಂಡಾ ಸಿಲಂಬರಸನ್ ಎಂಬ ವ್ಯಕ್ತಿಯನ್ನು ಬಂಧಿಸಿದ ಸುದ್ದಿ ಬಂದ ಹಿನ್ನೆಲೆಯಲ್ಲಿ ಕರೆ ನೀಡಿದ್ದ ಚಾಮರಾಜನಗರ- ತಮಿಳುನಾಡು ಗಡಿ ಬಂದ್ ಕರೆ ಹಿಂಪಡೆದಿರುವುದಾಗಿ ತೇಜಸ್ವಿ ತಿಳಿಸಿದ್ದಾರೆ.
ಈ ರೀತಿಯ ಘಟನೆ ಮರುಕಳಿಸಿದರೆ ಕನ್ನಡ ಹೋರಾಟಗಾರರು ಗಡಿ ಬಂದ್ ಮಾಡಿ ತಮಿಳುನಾಡು ಪ್ರವೇಶ ಮಾಡಬೇಕಾಗುತ್ತದೆ ಎಂದು ತಮಿಳುನಾಡು ಸರ್ಕಾರಕ್ಕೆ ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
