ಮೈಸೂರು: ವಯೋ ನಿವೃತ್ತಿ ಹೊಂದಿದ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ, ಕಲಬುರಗಿ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ. ಅಬ್ದುಲ್ ರಹಿಮಾನ್ ಎಂ ಅವರನ್ನು ಇಂದು ಕಾಲೇಜಿನಲ್ಲಿ ಅಭಿನಂದಿಸಲಾಯಿತು.
ಈ ವೇಳೆ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ. ಪ್ರತಿಮಾ ಡಿ.ಎಸ್ ಮಾತನಾಡಿ ಡಾ. ರಹಿಮಾನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಮಾದರಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು.
ಒಬ್ಬ ಶಿಕ್ಷಕ ಎಂದರೆ ಹೀಗಿರಬೇಕು ಎನ್ನುವಂತೆ ಇದ್ದರು ಎಂದು ಅವರ ಒಡನಾಟವನ್ನು ನೆನೆದರು.
ಕಾಲೇಜಿನ ಪ್ರಾಂಶುಪಾಲರಾದ ಲೀಲಾವತಿ ಕೆ. ಎನ್, ಮಾತನಾಡಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅಬ್ದುಲ್ ರಹಿಮಾನ್ ಅವರು ತಮ್ಮ ಓದಿನ ದಿನಗಳನ್ನು ಮೆಲುಕು ಹಾಕಿದರು.
ದಕ್ಷಿಣ ಕನ್ನಡ ಜಿಲ್ಲೆ,
ಪುತ್ತೂರು ತಾಲೂಕಿನ ಮಾಡನೂರ್ ಗ್ರಾಮದ ಕೆ.ಸೀದಿ ಕುಂಹಿ, ಜೈನಾಬಿ ದಂಪತಿಯ ಮಗನಾಗಿ , ಸ್ವಗ್ರಾಮದಲ್ಲೇ ಶಾಲಾ ಶಿಕ್ಷಣ ಪಡೆದು,ಪುತ್ತೂರಿನಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಕಡು ಬಡತನದ ದಿನಗಳನ್ನು ಕಳೆದುದಾಗಿ ಸ್ಮರಿಸಿದರು.
1992 ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ಆಯ್ಕೆ ಆಗಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಲ್ಲಿ ಸೇವೆ ಆರಂಭಿಸಿ, 30 ವರ್ಷದ ಸೇವೆ ಸಲ್ಲಿಸಿ ನಂತರ , ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ 2022 ರಲ್ಲಿ ವರ್ಗಾವಣೆಯಾಗಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದೇನೆ,ನನ್ನ ಸೇವೆ ತೃಪ್ತಿ ತಂದಿದೆ ಎಂದು ಅಬ್ದುಲ್ ರಹಿಮಾನ್ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ಕಲಬುರಗಿ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ ಸಾರ್ಥಕತೆಯನ್ನು ಕೃತಜ್ಞತೆಯಿಂದ ನೆನೆದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರರು ಅವರನ್ನು ಹೂಗುಚ್ಚ ನೀಡಿ ಅಭಿನಂದಿಸಿದರು.
ಅವರ ಪತ್ನಿ ಗುಲ್ಜನ್ ಮತ್ತು ವೈದ್ಯ ವೃತ್ತಿಯಲ್ಲಿರುವ ಮಕ್ಕಳಾದ ಅಮ್ರತ್, ಅಫ್ರತ್, ಅಧ್ಯಾಪಕ ಸಂಘದ ಕಾರ್ಯದರ್ಶಿ ಕೆ.ಎಲ್. ರಮೇಶ್ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಸಹ ಮುಖ್ಯಸ್ಥ ಗೋವಿಂದರಾಜು ನಿರೂಪಿಸಿ ವಂದನಾರ್ಪಣೆ ಮಾಡಿದರು.
ಅಧ್ಯಾಪಕ ಸಂಘದ ಖಜಾಂಚಿ ನಮ್ರತಾ ಎಮ್, ಎಲ್ಲಾ ವಿಭಾಗದ ಮುಖ್ಯಸ್ಥರು,
ಅಧ್ಯಾಪಕರು, ಅಧ್ಯಾಪಕೇತರರು, ಸಿಡಿಸಿ ಸಿಬ್ಬಂದಿ ಹಾಜರಿದ್ದರು.
