(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ನಗರದ ಸಿ.ಜೆ.ಎಂ ನ್ಯಾಯಾಲಯ ವ್ಯಕ್ತಿಯೊಬ್ಬರಿಗೆ ವಿಶೇಷ ಶಿಕ್ಷೆ ವಿಧಿಸಿದೆ.
ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮ್ಯೂಲ್ ಖಾತೆ (ಅಪರಾಧ ಜಾಲಗಳ ಪರವಾಗಿ ಹಣ ಸ್ವೀಕರಣೆ ಮತ್ತು ವರ್ಗಾಯಿಸುವ) ನೈಜತೆ ಪರಿಶೀಲನಾ ಸಂಬಂಧ ಹಾಜರಾಗಿದ್ದ ವೇಳೆ ಅಸಂಬದ್ದ ಹಾಗೂ ಏರುದನಿಯಲ್ಲಿ ಮಾತನಾಡಿ ಖಾತೆಗೆ ಸಂಬಂಧಿಸಿದ ಸಮರ್ಪಕ ದಾಖಲಾತಿ ನೀಡಲು ಹಿಂಜರಿದ ವ್ಯಕ್ತಿಗೆ ನಗರದ ಸಿ.ಜೆ.ಎಂ ನ್ಯಾಯಾಲಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಕಾಲ ಸಂದರ್ಶಕರು ಹಾಗೂ ಮ್ಯೂಲ್ ಖಾತೆದಾರರ ಹೇಳಿಕೆ ದಾಖಲೆ ಮಾಡುವ ಸಮುದಾಯ ಸೇವೆಗಾಗಿ ಪೊಲೀಸರಿಗೆ ಸಹಾಯ ಮಾಡುವಂತೆ ಆದೇಶಿಸಿದೆ.
ಡಿಜಿಪಿ ಸೈಬರ್ ಕಮಾಂಡ್ ವಿಂಗ್ ಅವರ ಆದೇಶದ ಮೇರೆಗೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಮ್ಯೂಲ್ ಖಾತೆಗಳ ನೈಜತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಠಾಣಾ ಪೊಲೀಸ್ ಸಿಬ್ಬಂದಿ ಪದ್ಮನಾಭ್ ಅವರು ಮ್ಯೂಲ್ ಖಾತೆದಾರರ ಪರಿಶೀಲನೆಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಆನಂದ್ ಎಂಬುವರ ತಾಯಿಯ ದೂರವಾಣಿಗೆ ಕರೆ ಮಾಡಿದ್ದರು. ಏಪ್ರಿಲ್ 8ರಂದು ಕಡ್ಡಾಯವಾಗಿ ಠಾಣೆಗೆ ಹಾಜರಾಗುವಂತೆ ಗಡವು ನೀಡಲಾಗಿತ್ತು. ಹಾಗಾಗಿ ಆನಂದ್ ತಾಯಿ ಜೊತೆ ಇಂದು ಠಾಣೆಗೆ ಹಾಜರಾಗಿದ್ದರು.
ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದ ವೇಳೆ ಆನಂದ್ ತೀರ ಅಸಂಬದ್ದವಾಗಿ ಏರುದನಿಯಲ್ಲಿ ಮಾತನಾಡಿದ್ದಲ್ಲದೆ ಮ್ಯೂಲ್ ಖಾತೆಗೆ ಸಂಬಂಧಿಸಿದ ಸಮರ್ಪಕ ದಾಖಲಾತಿಗಳನ್ನು ನೀಡಲು ಹಿಂಜರಿದು ತರ್ಕ ಮಾಡಿದ್ದರು.
ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಪರಿಶೀಲನೆ ಪ್ರಕ್ರಿಯೆ ವೇಳೆ ಸಹಕರಿಸದೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆನಂದ್ ವಿರುದ್ದ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ 1965 ಲಘು ಪ್ರಕರಣ ಕಲಂ ಒ ಅಂಡ್ ಕ್ಯೂ ಅಡಿ ಕೇಸು ದಾಖಲಿಸಲಾಗಿತ್ತು. ಹಾಗೂ ಸದರಿ ಪ್ರಕರಣದ ಅನ್ವಯ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣ ಸಂಬಂಧ ಸಿವಿಲ್ ಜಡ್ಜ್ (ಹಿರಿಯ ಶ್ರೇಣಿ) ಮತ್ತು ಸಿ.ಜೆ.ಎಂ ನ್ಯಾಯಾಲಯವು ಆನಂದ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಂದರ್ಶಕರನ್ನು ಬರ ಮಾಡಿಕೊಂಡು ಸೌಜನ್ಯಯುತವಾಗಿ ವ್ಯವಹರಿಸಿ ಕುಳಿತುಕೊಳ್ಳಲು ಹೇಳಿ ಪೊಲೀಸ್ ಠಾಣೆಯಲ್ಲಿರುವ ಮ್ಯೂಲ್ ಖಾತೆದಾರರ ಹೇಳಿಕೆಯನ್ನು ದಾಖಲು ಮಾಡಬೇಕು. ಈ ಪ್ರಕ್ರಿಯೆಗೆ ಪೊಲೀಸರಿಗೆ ನೆರವಾಗುವ ಮೂಲಕ ಸಮುದಾಯ ಸೇವೆ ಸಲ್ಲಿಸುವಂತೆ ನ್ಯಾಯಾಲಯವು ಆದೇಶಿಸಿದೆ.
ಅನುಚಿತವಾಗಿ ವರ್ತಿಸುವವರ ವಿರುದ್ದ ನೀಡಿರುವ ನ್ಯಾಯಾಲಯದ ಈ ಆದೇಶದ ಬಗ್ಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.
