ಮೈಸೂರು: ನಿರಾಮಯ ಫೌಂಡೇಶನ್ ವತಿಯಿಂದ ದೃಷ್ಟಿಹೀನರಿಗಾಗಿ ಆಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಹೆರಿಟೇಜ್ ಕಪ್ 2026 ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ದೀಪಾ ಅಕಾಡೆಮಿ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯ ವಾಗಿದ್ದು,
ಈ ರೋಚಕ ಪಂದ್ಯಾವಳಿಯಲ್ಲಿ ಐದು ತಂಡಗಳು ಭಾಗವಹಿಸಿದ್ದವು.
ಬೆಂಗಳೂರಿನ ದೀಪಾ ಅಕಾಡೆಮಿ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿ ಹೆರಿಟೇಜ್ ಕಪ್ ಮುಡಿಗೇರಿಸಿಕೊಂಡಿತು.
ಮೈಸೂರಿನ ರಂಗರಾವ್ ಶಾಲೆ ಪ್ರಥಮ ರನ್ನರ್-ಅಪ್ ಪ್ರಶಸ್ತಿ ಪಡೆದರೆ, ಆಶಾದೀಪ ತಂಡವು ದ್ವಿತೀಯ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸ್ನೇಹಜೀವಿ ಮತ್ತು ನಿರಾಮಯ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದವು.
ಸಮಾರೋಪ ಸಮಾರಂಭದಲ್ಲಿ ವಿಶ್ವದರ್ಜೆಯ ವಾಲ್ ಕ್ಲೈಂಬರ್ ಹಾಗೂ ಚಿನ್ನದ ಪದಕ ವಿಜೇತೆ ಸುನೀತಾ ಮತ್ತು ವಿಷನ್ ಎಂಪವರ್ ಸಂಸ್ಥೆಯ ಸ್ಥಾಪಕಿ, ರಾಷ್ಟ್ರಪತಿಗಳಿಂದ ಗೌರವಿಸಲ್ಪಟ್ಟ ವಿದ್ಯಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ವಿದ್ಯಾ ಅವರು ತಮ್ಮ ವೆಂಬಾ ಟೆಕ್ನಾಲಜೀಸ್ ಮತ್ತು ವಿಷನ್ ಎಂಪವರ್ ಮೂಲಕ ದೃಷ್ಟಿಹೀನ ವಿದ್ಯಾರ್ಥಿಗಳ ಸ್ಟೆಮ್ ಶಿಕ್ಷಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಈ ಕ್ರೀಡಾಕೂಟಕ್ಕೆ ವಿಷನ್ ಎಂಪವರ್, ಇನ್ನರ್ ವೀಲ್ ಕ್ಲಬ್, ಹವಾಯ್ ಸ್ಟೀಲ್ ಡೋರ್ಸ್ ಮತ್ತು ಮೈಸೂರಿನ ನೂತನ ಸಾರಿಗೆ ಸಂಸ್ಥೆ ಗೋಪಯಾಣ ಬೆಂಬಲ ನೀಡಿದ್ದವು.
ಈ ವೇಳೆ ಮಾತನಾಡಿದ ನಿರಾಮಯ ಫೌಂಡೇಶನ್ ಸಂಸ್ಥಾಪಕಿ ರಕ್ಷಿತಾ,ಸತತ ಮೂರನೇ ವರ್ಷವೂ ಹೆರಿಟೇಜ್ ಕಪ್ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ಪ್ರತಿಭಾವಂತ ಆಟಗಾರರನ್ನು ಗುರುತಿಸಲಾಗಿದ್ದು, ಅವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ತರಬೇತಿ ಶಿಬಿರ ಆಯೋಜಿಸಲು ನಿರ್ಧರಿಸಿದ್ದೇವೆ. ಈ ಆಟಗಾರರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವಂತೆ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.
ಸುಸೂತ್ರವಾಗಿ ಪಂದ್ಯಗಳನ್ನು ನಡೆಸಿಕೊಟ್ಟ ಅಂಪೈರ್ಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಫೌಂಡೇಶನ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
