ಮೈಸೂರು: ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ನಿರ್ಮಿಸಲಾಗಿರುವ ಭೋವಿ ನಿಗಮದ ವಸ್ತು ಪ್ರದರ್ಶನ ಮಳಿಗೆಯನ್ನು ನಿಗಮದ ಅಧ್ಯಕ್ಷ ರಾಮಪ್ಪ ಎಂ. ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭೋವಿ ಸಮುದಾಯದ ಐತಿಹಾಸಿಕ ಹಿನ್ನೆಲೆ, ಕಲ್ಲು ಒಡೆಯುವ ಕೃತಿಗಳು, ಶೈಕ್ಷಣಿಕ ಪ್ರಗತಿ ಹಾಗೂ ನಿಗಮದಿಂದ ಜಾರಿಗೆ ಬಂದಿರುವ ವಿವಿಧ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸ್ತಬ್ಧಚಿತ್ರ ಮತ್ತು ಮಳಿಗೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಭೋವಿ ಸಮುದಾಯದ ಇತಿಹಾಸ, ಶ್ರಮ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ದಸರಾ ಮಹೋತ್ಸವದಲ್ಲಿ ಪ್ರದರ್ಶಿಸಲಾಗಿದೆ. ಈ ಸ್ತಬ್ಧಚಿತ್ರ ಕೇವಲ ದಸರಾ ಉತ್ಸವಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರು ನಿರಂತರವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ನಿಗಮಕ್ಕೆ ಬಂದಿರುವ 100 ಕೋಟಿ ರೂ. ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಲಾಗುವುದು. ಸ್ವಾವಲಂಬಿ ಸಾರಥಿ ಕಾರು ವಿತರಣೆ, ಭೂ ರಹಿತ ಮಹಿಳೆಯರಿಗೆ ಭೂ ಒಡೆತನ, ಹೈನುಗಾರಿಕೆ ಮತ್ತು ಮನೆ ನಿರ್ಮಿಸಿಕೊಳ್ಳುವವರಿಗೆ ಸೆಂಟ್ರಿಂಗ್ ಸಾಮಗ್ರಿಗಳನ್ನು ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಕ್ವಾರಿಗಳನ್ನು ಮುಚ್ಚುವ ಕುರಿತಾದ ಆತಂಕಗಳ ಬಗ್ಗೆ ತಾಂತ್ರಿಕ ವರದಿ ಪಡೆದು, ಯಾವುದೇ ಸಮಸ್ಯೆಯಾಗದಂತೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಪ್ಪ ತಿಳಿಸಿದರು.
