ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್’ ಪ್ರಕರಣದಲ್ಲಿ ತಮ್ಮ ಹೆಸರು ತಳಕು ಹಾಕಲು ಯತ್ನಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಗಂಭೀರ ಆರೋಪ ಮಾಡಿದರು.
ಪ್ರಿಯಾಂಕ್ ಖರ್ಗೆ ಬಳಿ ಕೇವಲ ಟ್ರೇಲರ್ ಇರಬಹುದು, ಆದರೆ ಅಸಲಿ ಪಿಕ್ಚರ್ ನಮ್ಮ ಬಳಿ ಇದೆ. ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲು ಪೊಲೀಸರು ತರಾತುರಿಯಲ್ಲಿ ತನ್ನ ಮೇಲೆ ಕಟ್ಟುಕಥೆ ಹೆಣೆಯುತ್ತಿದ್ದಾರೆ ಎಂದು
ಬೆಂಗಳೂರಿನ ಜೆ.ಪಿ. ಭವನದಲ್ಲಿ
ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಆರೋಪಿಸಿದರು.
ಈ ವೇಳೆ ದಾಖಲೆ ಹಾಗೂ ಹಳೆಯ ವಿಡಿಯೋ ತುಣುಕುಗಳ ಸಮೇತ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರು.
ಪೊಲೀಸ್ ಕಮಿಷನರ್ ಕಚೇರಿ ಅಕ್ಟೋಬರ್ 29ರಂದು ಪ್ರಕಟಣೆ ಹೊರಡಿಸಿ, ಲೈಂಗಿಕ ದೌರ್ಜನ್ಯದ ವಿಚಾರ ಕಟ್ಟುಕಥೆ, ಘಟನೆಯೇ ನಡೆದಿಲ್ಲ ಎಂದು ಹೇಳಿದೆ. ಎಫ್ಎಸ್ಎಲ್ ವರದಿ ಬರುವ ಮುನ್ನವೇ ಘಟನೆ ನಡೆದಿಲ್ಲ ಎಂದು ಪೊಲೀಸರೇ ತೀರ್ಮಾನಿಸಿರುವುದು ಸಿದ್ದರಾಮಯ್ಯ ಅವರನ್ನು ರಕ್ಷಿಸಿ ಸರ್ಕಾರ ಉಳಿಸಿಕೊಳ್ಳುವ ತಂತ್ರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
2011ರ ಘಟನೆಯನ್ನು 2023ರಲ್ಲಿ ಶೂಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಅವರ ಪಾತ್ರವೇನು, ಕೇರಳದ ಹೆಣ್ಮಗಳು ಈ ಹಿಂದೆ ಮಾಡಿದ ಇ-ಮೇಲ್ ದೂರುಗಳು ಎಲ್ಲಿ ಹೋದವು,ಆ 14 ವರ್ಷದ ಹೆಣ್ಣು ಮಗಳಿಗೆ ಎಷ್ಟು ದುಡ್ಡು ಕೊಟ್ಟಿದ್ದೀರಿ? ವಿಡಿಯೋದಲ್ಲಿರುವ ಮೂರನೇ ವ್ಯಕ್ತಿ ಯಾರು, ಆತನ ಪಾತ್ರ ಏನು, ಕೃಪಾ ಆಳ್ವಾರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ? ಈ ಮೂಲದ ಬಗ್ಗೆ ಏಕೆ ಪೊಲೀಸರು ತನಿಖೆ ಮಾಡುತ್ತಿಲ್ಲ,2023 ರಲ್ಲಿ ವಿಡಿಯೋ ಹೊರ ಬರಲು ಕಾರಣ ಏನು ಎಂದು ಹೆಚ್ ಡಿ ಕೆ ಪ್ರಶ್ನೆಗಳ ಸುರಿಮಳೆಗೈದರು.
ಆರೋಪಿ ರಿತೀಶ್ ಕುಮಾರ್ ನನ್ನ ಮನೆಯಲ್ಲಿದ್ದ, ಅಲ್ಲಿಯೇ ಮೊಬೈಲ್ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಪೊಲೀಸರು ಕೋರ್ಟ್ಗೆ ನೀಡಿರುವ ದಾಖಲೆಯಲ್ಲೇ ಆತನ ವಿಳಾಸ ಉತ್ತರ ಪ್ರದೇಶದ ಗಾಜಿಯಾಬಾದ್ ಎಂದಿದೆ. ಅಕ್ಟೋಬರ್ 23ರಂದು ಮಧ್ಯಾಹ್ನ 2:59ಕ್ಕೆ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ ಆತನನ್ನು ಬಂಧಿಸಲಾಗಿದೆ. ನನ್ನ ದೆಹಲಿ ನಿವಾಸದಲ್ಲಿ ಆತ ಇರಲೇ ಇಲ್ಲ. ಹೀಗಿರುವಾಗ ನನ್ನ ನಿವಾಸ ಮಹಜರು ಮಾಡಲಾಗಿದೆ ಎಂಬ ಸುದ್ದಿಗಳನ್ನು ಗೃಹ ಸಚಿವರು ಮತ್ತು ಕಮಿಷನರ್ ಕಟ್ಟುಕಥೆಯಾಗಿ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಈ ಹಿಂದೆ ಸಿಡಿ ಹಾಗೂ ಸ್ಟಿಂಗ್ ಸಂಸ್ಕೃತಿಯ ಕುರಿತು ಡಿ.ಕೆ. ಶಿವಕುಮಾರ್ ಮಾತನಾಡಿದ್ದ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಹೆಚ್ಡಿಕೆ, ಮಿಸ್ಟರ್ ಶಿವಕುಮಾರ್, ನೀವೇ ಅಂದು ಬ್ಲ್ಯಾಕ್ಮೇಲ್, ಸಿಡಿ ಗ್ಯಾಂಗ್ ಬಗ್ಗೆ ಮಾತನಾಡಿದ್ದೀರಿ. ಈಗ ನಿಮ್ಮದೇ ಸರ್ಕಾರದಲ್ಲಿ ತನಿಖೆ ಯಾವ ಹಾದಿ ಹಿಡಿದಿದೆ? ಪ್ರಜ್ವಲ್ ರೇವಣ್ಣ ಪ್ರಕರಣದಲ್ಲೂ ನನ್ನ ಲಿಂಕ್ ಇಲ್ಲ, ಬದಲಿಗೆ ಡಿ.ಕೆ. ಶಿವಕುಮಾರ್ ಲಿಂಕ್ ಇದೆ. ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಆಗಸ್ಟ್ 5 ಮತ್ತು 6ರಂದು ಡಿಕೆಶಿ ಮನೆಗೆ ಹೋಗಿದ್ದ ಸಿಡಿಆರ್ ದಾಖಲೆಗಳಿವೆ. ಆತನ ಮೂಲಕವೇ ಎಲ್ಲವೂ ಸಿದ್ಧವಾಗಿದ್ದು, ಇದನ್ನು ಪೊಲೀಸರು ತನಿಖೆ ಮಾಡಲೇ ಇಲ್ಲ ಎಂದು ಗಂಭೀರ ಆರೋಪ ಮಾಡಿದರು.
ಕೇಂದ್ರ ಸಚಿವರು ಇಡಿ, ಐಟಿ ಛೂಬಿಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕೆಪಿಎಸ್ಸಿ ಅಕ್ರಮ ಮುಚ್ಚಿಹಾಕಲು ಎಸ್ಐಟಿ ತನಿಖೆ ತಡೆಯಲು ಸುಪ್ರೀಂ ಕೋರ್ಟ್ಗೆ ಹೋಗಿ ರಕ್ಷಣೆ ಪಡೆದವರು ನೀವು. ನನ್ನ 14 ವರ್ಷಗಳ ರಾಜಕೀಯ ಹೋರಾಟದಲ್ಲಿ ನಾನೆಂದೂ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಬಳಿ ಹೋಗಿ ನನ್ನ ರಕ್ಷಣೆಗೆ ಭಿಕ್ಷೆ ಬೇಡಿಲ್ಲ, ಯಾರ ವಿರುದ್ಧವೂ ತನಿಖಾ ಸಂಸ್ಥೆಗಳನ್ನು ಛೂಬಿಡಿ ಎಂದು ಹೇಳಿಲ್ಲ. ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟ್ ರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಮಂಜೇಗೌಡ ಮತ್ತಿತರರು ಹಾಜರಿದ್ದರು.
