ಮೈಸೂರು: ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂ ಹೆಚ್ಚಿಸಲು ನಿರ್ಧರಿಸಿರುವುದನ್ನು ಬಿಜೆಪಿ ಮುಖಂಡರಾದ ಡಾ. ಹೇಮಾ ನಂದೀಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಈ ನಿರ್ಧಾರವನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಹಾಲಿನ ದರ ಹೆಚ್ಚಳದಿಂದ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬಹುಸಂಖ್ಯಾತ ಜನರ ಆದಾಯ ಹೆಚ್ಚಾಗುವ ಬದಲು ಕುಸಿಯುತ್ತಿದೆ. ರಾಜ್ಯ ಸರ್ಕಾರ ಇದೇ ವರ್ಷದ ಮೇ 22ರಂದು ಹೆಚ್ಚಿಸಿದ್ದ ಕನಿಷ್ಠ ವೇತನವನ್ನೂ ತಡೆಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಹಾಲಿನ ದರ ಹೆಚ್ಚಿಸಿದರೆ ಜನಸಾಮಾನ್ಯರು ಜೀವನ ನಿರ್ವಹಣೆ ಮಾಡಲು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.
ಆದ್ದರಿಂದ ಜನಸಾಮಾನ್ಯರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ನಿರ್ಧಾರವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಡಾ. ಹೇಮಾ ನಂದೀಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
