ಮೈಸೂರು: ಕಾಫಿ, ಟೀಗೆ 5 ರೂ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಹೋಟೆಲ್ ಮಾಲೀಕರ ಸಂಘಕ್ಕೆ ಎಬಿಜಿಪಿ ಮನವಿ ಮಾಡಿದೆ.
ಒಂದು ಲೀಟರ್ ಹಾಲಿನ ದರ 8ರೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ನಗರದ ಹೋಟೆಲ್ಗಳಲ್ಲಿ ಪ್ರತಿ ಲೋಟ ಕಾಫಿ ಹಾಗೂ ಟೀ ಬೆಲೆಯನ್ನು ಏಕಾಏಕಿ 5ರೂ ಏರಿಸಿರುವುದಕ್ಕೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯಕರ್ತರು ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ .ನಾರಾಯಣಗೌಡ ಅವರನ್ನು ಭೇಟಿ ಮಾಡಿ ಹೋಟೆಲ್ ಮಾಲೀಕರ ಸಂಘವು ಮಧ್ಯಪ್ರವೇಶಿಸಿ ಕಾಫಿ,ಟೀ ಬೆಲೆ ಹೆಚ್ಚಳದ ಕುರಿತು ಮರುಪರಿಶೀಸಲು ಮನವಿ ಸಲ್ಲಿಸಲಾಯಿತು.
ಹಾಲಿನ ಬೆಲೆ ಏರಿಕೆಯಿಂದ ಹೋಟೆಲ್ಗಳ ನಿರ್ವಹಣಾ ವೆಚ್ಚದಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು. ಆದರೆ ಸಾಮಾನ್ಯವಾಗಿ ಒಂದು ಲೀಟರ್ ಹಾಲಿನಲ್ಲಿ ಹಲವು ಲೋಟ ಕಾಫಿ-ಟೀ ತಯಾರಾಗುವಾಗ, ಕೇವಲ 8ರೂ ಲೀಟರ್ ಏರಿಕೆಗೆ ಪ್ರತಿ ಲೋಟಕ್ಕೆ 5 ರೂ ಹೆಚ್ಚಳ ಮಾಡುವುದು ಯಾವ ಲೆಕ್ಕಾಚಾರದ ಆಧಾರದ ಮೇಲೆ ಎಂದು ಅವರು ಪ್ರಶ್ನಿಸಿದ್ದಾರೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದಿನನಿತ್ಯದ ಕಾಫಿ, ಟೀ ಕೂಡ ಹೊರೆಯಾಗುತ್ತಿದೆ. ಹಾಲಿನ ದರ ಏರಿಕೆಯ ನೆಪವೊಡ್ಡಿ ಸಾರ್ವಜನಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರುವುದು ನ್ಯಾಯಸಮ್ಮತವಲ್ಲ ಎಂದು ಮನದಟ್ಟು ಮಾಡಿದ್ದಾರೆ.
ಹೋಟೆಲ್ ಮಾಲೀಕರ ಸಂಘವು ಕೂಡಲೇ ಮಧ್ಯಪ್ರವೇಶಿಸಿ, ಈ ಹಠಾತ್ ಬೆಲೆ ಹೆಚ್ಚಳದ ಕುರಿತು ಮರುಪರಿಶೀಲನೆ ನಡೆಸಬೇಕು. ಬಳಕೆಯಾಗುವ ಹಾಲಿನ ಪ್ರಮಾಣ, ಸಕ್ಕರೆ ಹಾಗೂ ಇಂಧನ ವೆಚ್ಚಗಳನ್ನು ವೈಜ್ಞಾನಿಕವಾಗಿ ಲೆಕ್ಕಹಾಕಿ, ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಅನ್ಯಾಯವಾಗದ ರೀತಿಯಲ್ಲಿ ಸೂಕ್ತ ದರ ನಿಗದಿಪಡಿಸಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್, ಕೆ ಎಂ ನಿಶಾಂತ್, ದಯಾನಂದ ನಾಯಕ್, ಜತ್ತಿ ಪ್ರಸಾದ್, ದೀಪಕ್, ಸುಬ್ರಹ್ಮಣ್ಯರಾಜ್ ಅರಸ್,ನಿವೃತ ಶಿಕ್ಷಕ ಮಹದೇವಸ್ವಾಮಿ, ಶಿವಲಿಂಗ ಸ್ವಾಮಿ, ಜಗದೀಶ್ ಮತ್ತಿತರರು ಹಾಜರಿದ್ದರು.
ಮನವಿ ಸ್ವೀಕರಿಸಿದ ಹೋಟೆಲ್ ಮಾಲೀಕರ ಸಂಘ:
ಹಾಲಿನ ದರ ಏರಿಕೆಯ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ಹೆಚ್ಚಿಸಿರುವ ವಿಚಾರವಾಗಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು, ಕೇವಲ ಹಾಲಿನ ದರ ಮಾತ್ರವಲ್ಲದೆ ಪ್ರತಿನಿತ್ಯವೂ ಒಂದಲ್ಲ ಒಂದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹೋಟೆಲ್ಗಳಲ್ಲಿ ಬೆಲೆ ಹೆಚ್ಚಳ ಮಾಡಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೂ ಈ ವಿಚಾರವಾಗಿ ಒಂದು ಬಾರಿ ಹೋಟೆಲ್ ಮಾಲೀಕರೊಂದಿಗೆ ಚರ್ಚೆ ನಡೆಸಿ, ಗ್ರಾಹಕರಿಗೂ ಹೊರೆಯಾಗದಂತೆ ಹಾಗೂ ಹೋಟೆಲ್ ಮಾಲೀಕರಿಗೂ ನಷ್ಟವಾಗದಂತೆ ವೈಜ್ಞಾನಿಕ ರೀತಿಯಲ್ಲಿ ಬೆಲೆ ನಿಗದಿಪಡಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಗುವುದು ಎಂದು ನಾರಾಯಣ ಗೌಡ ಭರವಸೆ ನೀಡಿದರು.
