ಮೈಸೂರು: ವಿದ್ಯಾರ್ಥಿಗಳಿಗೆ ಹೂವು ನೀಡಿ ಸಿಹಿ ತಿನಿಸಿ ಅಕ್ಷರ ಅಭ್ಯಾಸ ಮಾಡಿಸುವ ಮೂಲಕ ಅಕ್ಕನ ಬಳಗ ಶಾಲೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ವಿಶೇಷವಾಗಿ ಶಾಲಾ ಪ್ರಾರಂಭೋತ್ಸವ ಮಾಡಲಾಯಿತು.

ಶಾಲೆಯನ್ನು ಸ್ವಚ್ಛತೆಗೊಳಿಸಿ ಅಲಂಕರಿಸಿ, ವಿಶೇಷವಾಗಿ ಸರಸ್ವತಿ ಹಾಗೂ ಗಣಪತಿ ಪೂಜೆ ಮಾಡಿ ಆರತಿ ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಶಿಕ್ಷಕರು ತಮ್ಮ ಮಡಿಲಲ್ಲಿ ಮಕ್ಕಳನ್ನು ಕೂರಿಸಿಕೊಂಡು ಗುರುಕುಲ ಪದ್ದತಿಯಂತೆ ಅಕ್ಕಿಯಲ್ಲಿ ಅಕ್ಷರ ಅಭ್ಯಾಸ ಮಾಡಿಸಿ ಮಕ್ಕಳ ಶೈಕ್ಷಣಿಕ ಶಿಕ್ಷಣ ಉಜ್ವಲವಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರೂ ತಮ್ಮದೇ ಆದ ಕೊಡುಗೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು
ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮಪ್ರಸಾದ್ ಮಾತನಾಡಿ, ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವವಾದದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ,ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಸಮಾಜ ಸೇವಕಿ ಖುಷಿ ವಿನು, ವಿನಯ್ ಕಣಗಾಲ್, ಚಕ್ರಪಾಣಿ, ಎಸ್ ಎನ್ ರಾಜೇಶ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ,ಶಿವಯ್ಯ, ಶಿಲ್ಪ ಶ್ರೀ, ನಾಗರತ್ನ, ಮಮತಾ, ರತ್ನಾಕರ, ಮಧು ಮತ್ತಿತರರು ಹಾಜರಿದ್ದರು.

