ಮೈಸೂರು: ದೇಶದ ಜನರಿಗೆ ಅನ್ನ ಕೊಡುವ ಕೃಷಿ,ತೋಟಗಾರಿಕೆ ಕ್ಷೇತ್ರ ಉಳಿಯಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಉಳಿಯುವುದರಿಂದ ಪದವೀಧರರು ಕೃಷಿ ಕ್ಷೇತ್ರದ ಕಡೆಗೆ ಮುಖ ಮಾಡುವಂತಹ ದಿನಗಳು ಬರಲಿದೆ ಎಂದು ತಿಳಿಸಿದರು.
ಮೈಸೂರು ತಾಲ್ಲೂಕಿನ ಯಚಲಹಳ್ಳಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ತೋಟಗಾರಿಕೆ ಮಹಾವಿದ್ಯಾಲಯ ಆಯೋಜಿಸಿದ್ದ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಜಿಟಿಡಿ ಮಾತನಾಡಿದರು.
ಒಂದು ಕಾಲದಲ್ಲಿ ಸಾವಿರ ತೆಂಗಿನ ಮರ ಇದ್ದರೂ ಆದಾಯ ಇಲ್ಲದಂತಾಗಿತ್ತು. ಐದು ಎಕರೆಯಲ್ಲಿ ಬಾಳೆ ಬೆಳೆದವನು ಶ್ರೀಮಂತ ಎನ್ನುತ್ತಿದ್ದರು.ಈಗ ಬೆಲೆ ಸಿಗದೆ ಬಾಳೆ ಬೆಳೆಗಾರರು ಕಂಗಲಾಗಿದ್ದಾರೆ. ಆರು ತಿಂಗಳಿನಿಂದ ತೆಂಗಿನಕಾಯಿ,ಎಳೆನೀರು, ಕೊಬ್ಬರಿ ಬೆಲೆ ಜಾಸ್ತಿಯಾಗಿದೆ ಎಂದು ವಿಷಾದಿಸಿದರು.
ಪ್ರಸ್ತುತ ದಿನಗಳಲ್ಲಿ ಕೃಷಿಕರ ಸ್ಥಿತಿ ಶೋಚನೀಯವಾಗಿದೆ. ಕೃಷಿ ಜಮೀನು ಕಡಿಮೆಯಾಗುತ್ತಿದೆ.ಆಹಾರ,ತೋಟಗಾರಿಕೆ ಬೆಳೆಗಳು ಇಲ್ಲದೆ ಮನುಷ್ಯ ಉಳಿಯಲು ಸಾಧ್ಯವಿಲ್ಲ. ಹಾಗಾಗಿ, ಕೃಷಿ ಚಟುವಟಿಕೆ ಮಾಡುವ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಕೃಷಿ,ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಲು ಸಾಧ್ಯವಾಗಿಲ್ಲ, ಕೃಷಿ,ತೋಟಗಾರಿಕೆ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಕೃಷಿ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ನೇಮಕಕ್ಕೆ ಚಿಂತನೆ ಮಾಡಲಾಗಿದೆ. ಅದರ ಬದಲಿಗೆ ನೇರ ನೇಮಕಾತಿ ಮಾಡಿಕೊಂಡು ಕೃಷಿ,ತೋಟಗಾರಿಕೆ ಕ್ಷೇತ್ರ ಉಳಿಸಬೇಕು ಎಂದು ಜಿಟಿಡಿ ಸರ್ಕಾರವನ್ನು ಒತ್ತಾಯಿಸಿದರು.
ಉಮೇಶ್ ಕತ್ತಿ ಅವರು ತೋಟಗಾರಿಕೆ ಸಚಿವರಾಗಿದ್ದಾಗ ತೋಟಗಾರಿಕೆ ಮಹಾವಿದ್ಯಾಲಯವನ್ನು ಬೇರೆ ಕಡೆ ಆರಂಭಿಸುವಂತೆ ಕೆಲವರು ಪ್ರಯತ್ನ ಮಾಡಿದ್ದರು.ಆದರೆ ನಾನು ಮೈಸೂರು ತಾಲ್ಲೂಕಿಗೆ ತರಲು ಹೋರಾಟ ಮಾಡಿ ಪ್ರಯತ್ನ ಮಾಡಿದ್ದರಿಂದಾಗಿ ಇಲ್ಲಿಯೇ ಸ್ಥಾಪನೆಯಾಯಿತು ಮಾಹಿತಿ ನೀಡಿದರು.
ವಿವಿಗೆ ರಸ್ತೆ ಮಾಡುವಂತೆ ಬೇಡಿಕೆ ಇಟ್ಟಿದ್ದರಿಂದ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಡಾಂಬರೀಕರಣ ಮಾಡಿಸಿದ್ದೇನೆ. ಈಗ ಕಾಂಪೌಂಡ್,ಆಡಿಟೋರಿಯಂ ಆಗುವಂತೆ ಹೇಳಿದ್ದರೂ ಈತನಕ ಯಾರೂ ಕೂಡ ನನ್ನ ಬಳಿಗೆ ಬಂದು ಮನವಿ ಕೊಟ್ಟಿಲ್ಲ. ಹಾಗಾಗಿ,ಸಚಿವರನ್ನು ಭೇಟಿ ಮಾಡಿ ಬೇಕಾದ ಅನುಕೂಲ ಮಾಡಿಕೊಡಲು ಗಮನಹರಿಸುವೆ ಎಂದು ಭರವಸೆ ನೀಡಿದರು.
ವಿವಿಯ ಹಲವಾರು ಸಮಸ್ಯೆ, ಬೇಡಿಕೆಗಳನ್ನು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಚರ್ಚಿಸುವೆ. ವಿವಿಯ ಉನ್ನತಿಗೆ ಬೇಕಾದ ಕಾರ್ಯಕ್ರಮ ರೂಪಿಸಲು ಯತ್ನಿಸುವೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಅಧ್ಯಕ್ಷತೆಯನ್ನು ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಜಿ.ಜನಾರ್ಧನ್ ವಹಿಸಿದ್ದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಡೀನ್ ಡಾ.ಕೆ.ರಾಮಚಂದ್ರನಾಯಕ್,ಸಹಾಯಕ ಡೀನ್ ಡಾ.ತನ್ವೀರ್ ಅಹ್ಮದ್,ನಿಲಯಪಾಲಕ ಡಾ.ಎಸ್.ಸಿ.ವೆಂಕಟೇಶ್,ಡಾ.ಅಮ್ರಿನ್ ತಾಜ್, ತರಗತಿ ಪ್ರತಿನಿಧಿಗಳಾದ ಬಿ.ಸೌಂದರ್ಯ, ಟಿ.ಲೇಖನ, ಬಿ.ಚಂದನಕುಮಾರ್, ಪಿ.ವಿ. ಜ್ಯೋತಿಕೃಷ್ಣ,ತರುಣ್ ಗೌಡ, ಎಚ್.ಎಂ.ಯಶ್ವಂತ್, ನಂದುಕುಮಾರ್, ಜೆ.ಐ.ಆಕಾಶ್,ಪಿ.ಲಕ್ಷ್ಮೀ, ಎಸ್.ಮನೋಹರಿ,ಆರ್.ನಿಸರ್ಗ, ಗುಂಗ್ರಾಲ್ ಛತ್ರದ ಗ್ರಾಪಂ ಅಧ್ಯಕ್ಷ ಯೋಗಮೂರ್ತಿ,ಮಾಜಿ ಅಧ್ಯಕ್ಷ ಇ.ಪಿ.ರವಿ ಮತ್ತಿತರರು ಉಪಸ್ಥಿತರಿದ್ದರು.
