ಮೈಸೂರು: ಮೈಸೂರಿನ ಬೃಂದಾವನ ಬಡಾವಣೆಯ ಎರಡನೇ ಹಂತದಲ್ಲಿರುವ ಗುರುದ್ವಾರದ ಪಕ್ಕದಲ್ಲಿ ಇತ್ತೀಚಿನವರೆಗೂ ಸಾರ್ವಜನಿಕರು ಕಸದ ತಿಪ್ಪೆ ಮಾಡಿದ್ದರು.
ಪ್ರತಿದಿನ ಕಸ ಸಂಗ್ರಹವಾಗುತ್ತಿದ್ದ ಈ ಜಾಗ, ಸ್ವಚ್ಛತೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಮೂಡಿಸುವಂತಿತ್ತು.
ಆದರೆ,ಇದೇ ಪ್ರದೇಶದ ಮುಂಭಾಗದಲ್ಲಿರುವ ಬಾಪೂಜಿ ವೃದ್ಧಾಶ್ರಮ ಮಾತ್ರ ಸ್ವಚ್ಛತೆ ಮತ್ತು ಶಿಸ್ತಿಗೆ ಮಾದರಿಯಾಗಿದೆ.
ವಯೋವೃದ್ಧರು ವಾಸಿಸುವ ಈ ಆಶ್ರಮದ ಆವರಣವನ್ನು ಯಾವುದೇ ಕಸ-ಕೊಳಕು ಇಲ್ಲದಂತೆ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಕಾಪಾಡಿಕೊಂಡು ಬರುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.
ಇದೀಗ ಗುರುದ್ವಾರದ ಪಕ್ಕದ ಕಸದ ತಾಣಕ್ಕೂ ಸುಂದರ ಮನಪರಿವರ್ತನೆಯ ಸ್ಪರ್ಶ ದೊರೆತಿರುವುದು ವಿಶೇಷ.
ನಗರಪಾಲಿಕೆಯವರು ಕಸ ಎಸೆಯುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ, ಅದರ ಸುತ್ತಲೂ ಹಸಿರು, ಹಳದಿ ಹಾಗೂ ನೀಲಿ ಬಣ್ಣಗಳ ಅಲಂಕಾರಿಕ ವಿನ್ಯಾಸಗಳನ್ನು ಅಳವಡಿಸಿ ಆ ಪ್ರದೇಶಕ್ಕೆ ಹೊಸ ರೂಪ ನೀಡಲಾಗಿದೆ. ಸರಳವಾದ ಈ ಪ್ರಯತ್ನದಿಂದ ಹಿಂದೆ ಅಸಹ್ಯ ಮೂಡಿಸುತ್ತಿದ್ದ ಸ್ಥಳ ಇದೀಗ ಕಣ್ಮನ ಸೆಳೆಯುವಂತಾಗಿದೆ.
ಕಸ ಎಸೆಯುವ ಜಾಗವನ್ನು ಬದಲಾಯಿಸುವುದಕ್ಕಿಂತ, ಕಸ ಎಸೆಯುವ ಮನಸ್ಥಿತಿಯನ್ನು ಬದಲಾಯಿಸುವುದು ಮುಖ್ಯ ಎಂಬ ಸಂದೇಶವನ್ನು ಈ ಕಾರ್ಯ ಸಾರುತ್ತಿದೆ.
ಸಾರ್ವಜನಿಕರು ಇನ್ನು ಮುಂದೆ ಈ ಸ್ಥಳದಲ್ಲಿ ಕಸ ಎಸೆಯದೆ, ಸ್ವಚ್ಛತೆಯನ್ನು ಕಾಪಾಡುವ ಮೂಲಕ ಈ ಉತ್ತಮ ಪ್ರಯತ್ನಕ್ಕೆ ಕೈಜೋಡಿಸಬೇಕಿದೆ.
ವಯೋವೃದ್ಧರ ಆಶ್ರಮದ ಸ್ವಚ್ಛತೆ ಒಂದೆಡೆಯಾದರೆ, ಅದರ ಎದುರಿನ ಕಸದ ತಾಣಕ್ಕೆ ದೊರೆತಿರುವ ಈ ಹೊಸ ರೂಪ ಮತ್ತೊಂದೆಡೆ—ಸ್ವಚ್ಛತೆ ಕೇವಲ ಆಡಳಿತದ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ನೆನಪಿಸುವಂತಿದೆ.
ಬೃಂದಾವನ ಬಡಾವಣೆಯ ಈ ಸಣ್ಣ ಬದಲಾವಣೆ, ಸಾರ್ವಜನಿಕರ ಮನದಲ್ಲೂ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿ ಎಂಬುದು ಸ್ಥಳೀಯರ ಆಶಯವಾಗಿದೆ.
ಚಿತ್ರ ಲೇಖನ
ಲಯನ್ ಸಿ.ಆರ್.ದಿನೇಶ್
ಪ್ರಾಂಶುಪಾಲರು
ಮಥುರಾನಗರ,ಮೇಟಗಳ್ಳಿ
