ವಾಷಿಂಗ್ಟನ್: ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರ ನಡೆದಿದೆ.
ಇದರಲ್ಲಿ ವಿಶ್ವಸಂಸ್ಥೆಯ ಮಂಡಳಿ, ಭಾರತ-ಫ್ರಾನ್ಸ್ ನೇತೃತ್ವದ ಅಂತಾರಾಷ್ಟ್ರೀಯ ಸೌರ ಒಕ್ಕೂಟವೂ ಸೇರಿದೆ.
ಈ ಅಂತಾರಾಷ್ಟ್ರೀಯ ಸಂಸ್ಥೆಗಳು, ಒಪ್ಪಂದಗಳು ಅಮೆರಿಕದ ಹಿತಾಸಕ್ತಿಗೆ ವಿರುದ್ಧ ಮತ್ತು ಅನಗತ್ಯವಾಗಿದ್ದು, ಇದರಿಂದ ಯುನೈಟೆಡ್ ಸ್ಟೇಟ್ ಹೊರ ನಡೆಯುತ್ತಿದೆ ಎಂಬ ಜ್ಞಾಪಕಪತ್ರಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.
ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯೇತರ ಸಂಸ್ಥೆಗಳ ಸದಸ್ಯರಾಗಿ ಉಳಿಯುವುದು, ಭಾಗವಹಿಸುವುದು ಅಥವಾ ಬೆಂಬಲ ನೀಡುವುದು ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಇದರಲ್ಲಿ 31 ವಿಶ್ವ ಸಂಸ್ಥೆಯ ಸಂಘಟನೆಯಾಗಿದ್ದು, 35 ವಿಶ್ವಸಂಸ್ಥೆಯೇತರ ಸಂಘಟನೆಗಳಾಗಿದೆ. ಇದು ಅಮೆರಿಕದ ಹಿತಾಸಕ್ತಿ, ಭದ್ರತೆ, ಆರ್ಥಿಕ ಸಮೃದ್ಧಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.
ಸಹಿ ಹಾಕಿದ ಬೆನ್ನಲ್ಲೇ ಉಲ್ಲೇಖಿಸಿದ ಸಂಘಟನೆಗಳಿಂದ ಯುನೈಟೆಡ್ ಸ್ಟೇಟ್ನ ಎಲ್ಲಾ ಕಾರ್ಯಾಕಾರಿ ಇಲಾಖೆ ಮತ್ತು ಏಜೆನ್ಸಿಗಳು ತಕ್ಷಣಕ್ಕೆ ತಮ್ಮ ಹೆಜ್ಜೆಯನ್ನು ಹಿಂದಿಡಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಮೈಕ್ ವಾಲ್ಟ್ಜ್, ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿದ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಅಮೆರಿಕ ಇನ್ನು ಮುಂದೆ ಹಣಕಾಸು ಒದಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
