ದುಬೈ: ದುಬೈನಿಂದ ಇಸ್ರೇಲ್ನ ತೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿದ್ದ ಒಮಾನ್ ಮೂಲದ ಸಹ-ಪೈಲಟ್ ನಡೆಸಿದ ಭೀಕರ ದಾಳಿಯ ಯತ್ನವನ್ನು ತಡೆದ ಭಾರತೀಯ ಮೂಲದ ಕ್ಯಾಪ್ಟನ್ ಪೈಲಟ್ ಸ್ಮಿತ್ ಮಚ್ಚಾರ್
ಬಗ್ಗೆ ಇಡೀ ವಿಶ್ವದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತೀಯ ಮೂಲದ ಕ್ಯಾಪ್ಟನ್ ಪೈಲಟ್ ಅಮೆರಿಕದ 9/11 ಮಾದರಿಯ ಬೃಹತ್ ದುರಂತವನ್ನು ತಪ್ಪಿಸಿ,180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಕೊಂಡಾಡಿವೆ.
ವಿಮಾನವು ಆಗಸದಲ್ಲಿ ಹಾರಾಡುತ್ತಿದ್ದಾಗ ಉಗ್ರ ಮನಸ್ಥಿತಿಯ ಒಮಾನಿ ಸಹ ಪೈಲಟ್, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದಾನೆ.
ಚಾಕು ಇರಿತಕ್ಕೊಳಗಾಗಿ ರಕ್ತ ಸುರಿಯುತ್ತಿದ್ದರೂ ಎದೆಗುಂದದೆ ಕ್ಯಾಪ್ಟನ್ ಸ್ಮಿತ್ ಅವರು ವಿಮಾನವನ್ನು ನೆಲಕ್ಕೆ ಅಪ್ಪಳಿಸದಂತೆ ಮತ್ತು ಹೈಜಾಕ್ ಮಾಡದಂತೆ ತೀವ್ರವಾಗಿ ಪ್ರತಿರೋಧ ಒಡ್ಡಿ ತಪ್ಪಿಸಿದ್ದಾರೆ
ಈ ವೇಳೆ ಕಂಟ್ರೋಲ್ ರೂಮ್ ನಿಂದ ಹೊರಬಂದ ಕಿರುಚಾಟ ಕೇಳಿ, ಪ್ರಯಾಣಿಕರೊಂದಿಗೆ ಸಾಧಾರಣ ಉಡುಪಿನಲ್ಲಿದ್ದ ಇತರೆ ಪೈಲಟ್ಗಳು ಹಾಗೂ ಪ್ರಯಾಣಿಕರು ಕಾಕ್ ಪೀಟ್ ಗೆ ಧಾವಿಸಿ ದಾಳಿಕೋರನನ್ನು ಬಂಧಿಸಿದ್ದಾರೆ.
ಬಳಿಕ, ಪ್ರಯಾಣಿಕರ ತಂಡದಲ್ಲಿದ್ದ ಪೈಲಟ್ಗಳು ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಕ್ಯಾಪ್ಟನ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಸೌದಿ ಅರೇಬಿಯಾದ ತಬುಕ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯರೊಬ್ಬರು ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರಾಗಲು ನೆರವಾಗಿದ್ದಾರೆ. ದಾಳಿಕೋರ ಸಹ- ಪೈಲಟ್ ನನ್ನು ವಶಕ್ಕೆ ಪಡೆಯಲಾಗಿದೆ.
