ಯಳಂದೂರು: ಯಳಂದೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಬೈಪಾಸ್ ರಸ್ತೆಯಲ್ಲಿ ನೆಟ್ಟಿರುವ ಗಿಡಗಳಿಗೆ ಶಾಸಕ ಎ ಆರ್ ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಗಿಡಗಳಿಗೆ ನೀರು ಹಾಕುವ ಮೂಲಕ ಪೋಷಣೆ ಮಾಡಲಾಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವರಣ ಹಾಗೂ ಬೈಪಾಸ್ ರಸ್ತೆಯಲ್ಲಿ ಪರಿಸರ ಪ್ರೇಮಿ ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆ ಹಾಗೂ ಕೆನರಾ ಬ್ಯಾಂಕ್ ಸಹಯೋಗದಿಂದ ನೆಟ್ಟಿರುವ ಸಾಲು ಗಿಡಗಳು ಮಳೆ ಇಲ್ಲದೆ ಸೊರಗಿದ್ದವು.
ಜತೆಗೆ ಪೋಷಣೆ ಇಲ್ಲದೆ ಗಿಡಗಳ ಸುತ್ತ ಕಳೆ ಬೆಳೆದಿದೆ, ಇದನ್ನು ಗಮನಿಸಿದ ಶಾಸಕ ಎ ಆರ್ ಕೃಷ್ಣಮೂರ್ತಿ ಅಭಿಮಾನಿ ಬಳಗದವರು ಸಾರ್ವಜನಿಕ ಆಸ್ಪತ್ರೆ ಹಾಗೂ ಎನ್ ಎಚ್ ಬೈಪಾಸ್ ರಸ್ತೆ ಬದಿಯಲ್ಲಿ ಇರುವ ಗಿಡ ಮರಗಳ ಸುತ್ತ ಸ್ವಚ್ಛಗೊಳಿಸಿ,ಗಿಡಗಳ ಸುತ್ತ ಪಾತಿ ಮಾಡಿ ನೀರು ಹಾಕುವ ಮೂಲಕ ಗಿಡಗಳನ್ನು ಸಂರಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಸಮಿತಿ ಸದಸ್ಯರಾದ ದುಗ್ಗಹಟ್ಟಿ ಜಿ ಮಾದೇಶ್ ಮಾತನಾಡಿ,ಗಿಡಗಳ ಪೋಷಣೆಗೆ ಸರಿಯಾದ ನೀರು, ಸೂರ್ಯನ ಬೆಳಕು, ಪೋಷಕಾಂಶಗಳು ಮತ್ತು ನಿಯಮಿತ ನಿರ್ವಹಣೆ ಅತ್ಯಗತ್ಯ ಎಂದು ಹೇಳಿದರು.
ಮಣ್ಣಿನ ತೇವಾಂಶ, ಗಿಡದ ಪ್ರಕಾರಕ್ಕೆ ಅನುಗುಣವಾದ ಬಿಸಿಲು ಮತ್ತು ಸಾವಯವ ಗೊಬ್ಬರದ ಬಳಕೆಯಿಂದ ಗಿಡಗಳು ಹುಲುಸಾಗಿ ಬೆಳೆಯಲುಸಾಧ್ಯ ಎಂದು ತಿಳಿಸಿದರು.
ಮಳೆಗಾಲ ಬಂದಾಗಷ್ಟೇ ನಾವು ಪರಿಸರ ಎನ್ನಬಾರದು. ವರ್ಷಪೂರ್ತಿ ಪರಿಸರ ಪ್ರಜ್ಞೆಯಿಂದ ನೆಟ್ಟ ಗಿಡಗಳ ಪೋಷಣೆ ಮಾಡುತ್ತ ಇರಬೇಕು. ಪರಿಸರ ಉಳಿದರೆ ಮಾತ್ರ ನಾವು ಎನ್ನುವ ಸೂಕ್ಷ್ಮ ಅರಿತುಕೊಳ್ಳಬೇಕು ಎಂದು ತಿಳಿಹೇಳಿದರು.
ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದಾಗ ಉತ್ತಮ ಪರಿಸರ ಕಾಪಾಡಲು ಸಾಧ್ಯವಾಗಲಿದೆ ಆ ನಿಟ್ಟಿನಲ್ಲಿ ಅಭಿಮಾನಿ ಬಳಗದ ವತಿಯಿಂದ ಮಳೆಗಾಲ ಪ್ರಾರಂಭವಾಗಿರುವುದರಿಂದ ಗಿಡಗಂಟೆ ತೆಗೆದು ಸ್ವಚ್ಛತೆ ಮಾಡಿ ನೀರು ಹಾಕಿ ಪೋಷಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯಧಿಕಾರಿ ಡಾ. ಶ್ರೀಧರ್, ಶಾಸಕ ಎ ಆರ್ ಕೃಷ್ಣಮೂರ್ತಿ ಅಭಿಮಾನಿ ಬಳಗದ ಹೊನ್ನೂರು ರಾಘವೇಂದ್ರ ಪ್ರಸಾದ್, ಆರೋಗ್ಯ ಸಮಿತಿ ಸದಸ್ಯರಾದ ಜಿ ಮಾದೇಶ್, ಕಂದಳ್ಳಿ ಕುಮಾರ್,ರೇವಣ್ಣ, ಜಮೀರ್, ಈರಣ್ಣ, ಏನ್ ಶಂಕರ್, ರೂಪೇಶ್ ಮುಂತಾದವರು ಹಾಜರಿದ್ದರು.
