ಮೈಸೂರು: ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮೈಸೂರು ರೈಲು ನಿಲ್ದಾಣದ ಕುರಿತು ಪತ್ರ ಬರೆದಿದ್ದಾರೆ.
ರೈಲು ನಿಲ್ದಾಣದ ಬಹುಕಾಲದ ನಿರೀಕ್ಷೆಯ ತೃತೀಯ ಪ್ರವೇಶ ದ್ವಾರ ಹಾಗೂ ಮೇಲ್ದರ್ಜೆಗೇರಿಕೆ ಕಾಮಗಾರಿಗಳಿಗೆ ತಕ್ಷಣ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ಜೊತೆಗೆ, ಚೆನ್ನೈ–ಮೈಸೂರು ಹೈಸ್ಪೀಡ್ ರೈಲು (ಬುಲೆಟ್ ಟ್ರೈನ್) ಸಂಪರ್ಕವನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಗಣಿಸುವಂತೆ ಕೋರಿದ್ದಾರೆ.
ಮೈಸೂರು ನಗರವು ಕರ್ನಾಟಕದ ಪ್ರಮುಖ ಸಾಂಸ್ಕೃತಿಕ, ಶೈಕ್ಷಣಿಕ, ಪ್ರವಾಸೋದ್ಯಮ ಹಾಗೂ ಆರ್ಥಿಕ ಕೇಂದ್ರವಾಗಿ ಬೆಳೆಯುತ್ತಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿರುವ ಯದುವೀರ್ ಅವರು, ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಮೈಸೂರು ರೈಲು ನಿಲ್ದಾಣದ ತೃತೀಯ ಪ್ರವೇಶ ದ್ವಾರ ಹಾಗೂ ಮೇಲ್ದರ್ಜೆಗೇರಿಕೆ ಯೋಜನೆ ಕುರಿತು, ಸಚಿವರ ಹಿಂದಿನ ನಿರ್ದೇಶನದಂತೆ ತಾವು ವಾಸ್ತುಶಿಲ್ಪಿಗಳು ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದು, ಯೋಜನೆಯ ವಿನ್ಯಾಸ ಮತ್ತು ಯೋಜನಾ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ, ಈ ಹಿನ್ನೆಲೆಯಲ್ಲಿ ಯೋಜನೆಗೆ ಶೀಘ್ರದಲ್ಲೇ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ನೀಡಿ, ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಜತೆಗೆ ಚೆನ್ನೈ–ಮೈಸೂರು ಹೈಸ್ಪೀಡ್ ರೈಲು ಮಾರ್ಗ ವಿಸ್ತರಣೆಯ ಸಾಧ್ಯತೆಯನ್ನು ಭವಿಷ್ಯದ ಯೋಜನೆಗಳು ಹಾಗೂ ಕಾರ್ಯಸಾಧ್ಯತಾ ಅಧ್ಯಯನಗಳಲ್ಲಿ ಪರಿಗಣಿಸುವಂತೆ ಯದುವೀರ್ ರೈಲ್ವೆ ಸಚಿವಾಲಯವನ್ನು ಕೋರಿದ್ದಾರೆ.
ಈ ಯೋಜನೆಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಆರ್ಥಿಕ ಏಕೀಕರಣವನ್ನು ಬಲಪಡಿಸುವುದರ ಜೊತೆಗೆ, ಪ್ರವಾಸೋದ್ಯಮ, ವ್ಯಾಪಾರ ಹಾಗೂ ಹೂಡಿಕೆ ಅವಕಾಶಗಳಿಗೆ ಉತ್ತೇಜನ ನೀಡಲಿದೆ. ವೇಗವಾದ ಹಾಗೂ ಪರಿಸರ ಸ್ನೇಹಿ ನಗರಾಂತರ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದರೊಂದಿಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಹಾಗೂ ಮೈಸೂರಿನ ಬೆಳೆಯುತ್ತಿರುವ ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಸರ ವ್ಯವಸ್ಥೆಗೆ ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಎರಡೂ ಮಹತ್ವದ ಯೋಜನೆಗಳು ಮೈಸೂರು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲಿದ್ದು, ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವುದರ ಜೊತೆಗೆ ದಕ್ಷಿಣ ಭಾರತದಲ್ಲಿ ವಿಶ್ವಮಟ್ಟದ ಸಾರಿಗೆ ಮೂಲಸೌಕರ್ಯ ನಿರ್ಮಾಣದ ಗುರಿಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
422 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಈ ಯೋಜನೆಯು ಪ್ರಯಾಣಿಕರ ಅನುಕೂಲತೆಯನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ, ಪ್ರಸ್ತುತ ಇರುವ ಪ್ರವೇಶ ಮಾರ್ಗಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಅಲ್ಲದೆ, ವಿವಿಧ ಸಾರಿಗೆ ವ್ಯವಸ್ಥೆಗಳ ನಡುವಿನ ಸಂಪರ್ಕವನ್ನು ಸುಧಾರಿಸಿ, ದಕ್ಷಿಣ ಭಾರತದ ಪ್ರಮುಖ ರೈಲು ಕೇಂದ್ರವಾಗಿ ಮೈಸೂರಿನ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.
