ಮೈಸೂರು: ಕಾವೇರಿ ಮತ್ತು ಕಬಿನಿ ಭಾಗದ ರೈತರ ಬದುಕು ಬೀದಿಗೆ ಬಂದಿದೆ,ಆದರೆ ಕೆಆರ್ಎಸ್ನಲ್ಲಿ 97 ಅಡಿ ನೀರಿದ್ದರೂ ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಟ್ಟು ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಬನ್ನೂರಿನ ಕಾವೇರಿ ಸರ್ಕಲ್ ನಿಂದ ಸಂತೆಮಾಳದ ವರೆಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ ನಡೆಸಿ ನಿಖಿಲ್ ಮಾತನಾಡಿದರು.
ಹಿಂದಿನ ಸರ್ಕಾರದಲ್ಲಿ 77 ಅಡಿ ಇದ್ದರೂ ನಾಲೆಗಳಿಗೆ ನೀರು ಬಿಡಲಾಗಿತ್ತು,ಈಗ 97 ಅಡಿ ಇದ್ದರೂ ನಾಲೆ ಆಧುನೀಕರಣ, ಹೂಳು ತೆಗೆಯದೆ ಗುತ್ತಿಗೆದಾರರಿಗೆ ಕಾಂಟ್ರಾಕ್ಟ್ ಕೊಟ್ಟು ಪರ್ಸೆಂಟೇಜ್ ಹೊಡೆಯುತ್ತಿದ್ದಾರೆ ಎಂದು ಮಭರ ಆರೋಪ ಮಾಡಿದರು.
ಒಂದು ಎಕರೆಗೆ ರೈತ 25-30 ಸಾವಿರ ಖರ್ಚು ಮಾಡಿದ್ದಾನೆ, ಸರ್ಕಾರ 2500 ರೂ. ಭಿಕ್ಷೆ ಹಾಕುತ್ತಿದೆ. ಕನಿಷ್ಠ 25,000 ಪರಿಹಾರ, ನಿರಂತರ ವಿದ್ಯುತ್, ಮೇವು ಕೇಂದ್ರ ತೆರೆಯಬೇಕು, ಸಂಪೂರ್ಣ ಸಾಲಮನ್ನಾ ಮಾಡಬೇಕು, ಇಲ್ಲದಿದ್ದರೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು..
ವಿಧಾನಸಭೆಯಲ್ಲೇ ಸರ್ಕಾರವೇ ಒಪ್ಪಿಕೊಂಡಂತೆ ಕಳೆದ 3 ವರ್ಷಗಳಲ್ಲಿ ರೈತರ ಒಂದೇ ಒಂದು ರೂಪಾಯಿ ಸಾಲಮನ್ನಾ ಮಾಡಿಲ್ಲ. ರೈತನಿಗೆ ಶೂನ್ಯ, ಆದರೆ ಹಳೆಯ ಸಾಲದ ಬಡ್ಡಿ ಕಟ್ಟಲು ಮಾತ್ರ ಪ್ರತಿ ವರ್ಷ ಬೊಕ್ಕಸದಿಂದ 48,000 ಕೋಟಿ ರೂಪಾಯಿ ಪೋಲಾಗುತ್ತಿದೆ. ಇದು ಅಭಿವೃದ್ಧಿ ಸರ್ಕಾರವಲ್ಲ, ಸಾಲ ಮಾಡಿ ಬಡ್ಡಿ ಕಟ್ಟುವ ದಿವಾಳಿ ಸರ್ಕಾರ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಜಿಲ್ಲಾಧ್ಯಕ್ಷರಾದ ಅಶ್ವಿನ್ ಕುಮಾರ್, ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ,
ಮುಖಂಡರಾದ ಕೃಷ್ಣನಾಯಕ್, ಅಭಿಷೇಕ್ ಮಣೆಗಾರ್, ತಾಲ್ಲೂಕು ಅಧ್ಯಕ್ಷ ಚಿನ್ನಸ್ವಾಮಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು , ಕಾರ್ಯಕರ್ತರು, ಯುವ ಮುಖಂಡರು ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದರು.
