ಮೈಸೂರು: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ 317ಜಿ-3 ಜಿಲ್ಲೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಸಂಪುಟದ ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಮುಂಬರುವ ಸಾಲಿನಲ್ಲಿ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಸಂಘಟನೆಯ ಸದಸ್ಯತ್ವವನ್ನು ವೃದ್ಧಿಸುವುದು ಹಾಗೂ ನಾಯಕತ್ವ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜ್ಯಪಾಲರಾದ ಲಯನ್ ಕೆ.ಎಲ್. ರಾಜಶೇಖರ ಅವರು, ಲಯನ್ಸ್ ಸಂಸ್ಥೆಯು ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸೇವೆಯೇ ಲಯನ್ಸ್ ಸಂಸ್ಥೆಯ ಧ್ಯೇಯವಾಗಿದ್ದು, ಪ್ರತಿಯೊಬ್ಬ ಪದಾಧಿಕಾರಿಯೂ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಾತ್ರ ಸಂಘಟನೆಯ ಉದ್ದೇಶಗಳು ಸಾರ್ಥಕವಾಗುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿಯೋಜಿತ ರಾಜ್ಯಪಾಲರಾದ ಲಯನ್ ಮತಿದೇವ್ ಕುಮಾರ್ ಅವರು ಮಾತನಾಡಿ ಕಾರ್ಯದರ್ಶಿಗಳು ಮತ್ತು ಜಿಲ್ಲಾಧ್ಯಕ್ಷರುಗಳು ಜಿಲ್ಲೆಗೆ ಮತ್ತು ಸಂಸ್ಥೆಗೆ ಕೊಂಡಿಯಾಗಿದ್ದು ಸಂಘಟನೆಯ ಆಡಳಿತ ವ್ಯವಸ್ಥೆಯ ಬೆನ್ನೆಲುಬಾಗಿದೆ, ಸಭೆಗಳ ನಿರ್ವಹಣೆ, ವರದಿಗಳ ಸಿದ್ಧತೆ, ದಾಖಲೆಗಳ ಸಂರಕ್ಷಣೆ, ಸದಸ್ಯರ ಮಾಹಿತಿಯ ನಿರ್ವಹಣೆ ಹಾಗೂ ಜಿಲ್ಲಾ ಮತ್ತು ಅಂತರಾಷ್ಟ್ರೀಯ ಕಚೇರಿಗಳೊಂದಿಗೆ ಸಮನ್ವಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿವರಿಸಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ವರದಿ ಸಲ್ಲಿಕೆ, ತಂತ್ರಜ್ಞಾನ ಬಳಕೆ ಮತ್ತು ಮಾಹಿತಿ ವಿನಿಮಯದ ಮಹತ್ವವನ್ನು ಅವರು ಒತ್ತಿ ಹೇಳಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ರಾಜ್ಯಪಾಲರ ದೂರದೃಷ್ಟಿ ವಿಷಯದ ಬಗ್ಗೆ ಲಯನ್ ಕೆ ಎಲ್ ರಾಜಶೇಖರ, ಸಂಪುಟ ಸದಸ್ಯರ ಜವಾಬ್ದಾರಿಗಳ ಬಗ್ಗೆ ಲಯನ್ ಜಯಪ್ರಕಾಶ್ ಎಂ ಎನ್, ತಂಡ ನಿರ್ಮಾಣ ಮತ್ತು ಪರಿಣಾಮಕಾರಿ ಸಂವಹನ ಲಯನ್ ಜಿ. ಶ್ರೀನಿವಾಸ , ನಾಯಕತ್ವ ಅಭಿವೃದ್ಧಿ ಮತ್ತು ವ್ಯಕ್ತಿತ್ವ ನಿರ್ಮಾಣ ಲಯನ್ ಡಾಕ್ಟರ್ ಜಿ.ಎ ರಮೇಶ್ ಹಾಗೂ ಲಯನ್ಸ್ ಸಂವಿಧಾನ ಮತ್ತು ಸಾರ್ವಜನಿಕ ಸಂಪರ್ಕ ಕೌಶಲ್ಯ ಈ ವಿಷಯದ ಬಗ್ಗೆ ಲಯನ್ ಡಾಕ್ಟರ್ ಎನ್ ಕೃಷ್ಣೇಗೌಡ ವಿವರಿಸಿದರು.
ಮೊದಲನೇ ಜಿಲ್ಲಾ ರಾಜ್ಯಪಾಲರಾದ ಲಯನ್ ಟಿ ನಾರಾಯಣಸ್ವಾಮಿ ಅವರು
ಜಿಲ್ಲಾಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿರುವ ಕ್ಲಬ್ಗಳ ಬೆಳವಣಿಗೆಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಕ್ಲಬ್ಗಳ ನಡುವೆ ಉತ್ತಮ ಸಮನ್ವಯವನ್ನು ಬೆಳೆಸುವ ಮೂಲಕ ಸೇವಾ ಚಟುವಟಿಕೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ತಿಳಿಸಲಾಯಿತು.
ಎರಡನೇ ಜಿಲ್ಲಾ ಉಪ ರಾಜ್ಯಪಾಲರಾದ ಲಯನ್ ಎಮ್.ಸಿದ್ದೇಗೌಡ ರವರು ಸದಸ್ಯರಲ್ಲಿ ಸೇವಾ ಮನೋಭಾವವನ್ನು ಬೆಳೆಸುವುದು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವುದು ಹಾಗೂ ಯುವಜನರನ್ನು ಸಂಘಟನೆಯತ್ತ ಆಕರ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟಿ ಹೆಚ್ ವೆಂಕಟೇಶ್, ಖಜಾಂಚಿ ಲಯನ್ ಎ. ಪಿ ಭರತೇಶ್, ಜಿಎಲ್ ಟಿ ಸಂಯೋಜಕರಾದ ಲಯನ್ ಎಲ್.ವಿ.ಶ್ರೀನಿವಾಸ್ ,ಜಿಲ್ಲಾ ರಾಯಭಾರಿ ಎಸ್ ಪಿ ಆದರ್ಶ ಹಾಗೂ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ.ಆರ್. ದಿನೇಶ್ ಪಾಲ್ಗೊಂಡಿದ್ದರು.
