ಬೆಳಗಾವಿ: ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಪಕ್ಷ ಅದ್ದೂರಿ ಸ್ವಾಗತ ನೀಡಿದವು.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಡಿಕೆ,ಡಿಕೆ ಎಂಬ ಜಯಘೋಷ ಮೊಳಗಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಪ್ರಾದೇಶಿಕ ಆಯುಕ್ತೆ ಕೆ. ಜಾನಕಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಐಜಿಪಿ ಸಂದೀಪ ಪಾಟೀಲ ಹಾಗೂ ಇತರ ಅಧಿಕಾರಿಗಳು ಸರಕಾರಿ ಗೌರವದೊಂದಿಗೆ ಬರಮಾಡಿಕೊಂಡರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಉತ್ತರ ದ್ವಾರದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪುಷ್ಪ ನಮನ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಯು.ಟಿ.ಖಾದರ್,ಹೆಚ್.ಕೆ.ಪಾಟೀಲ್ ಮತ್ತಿತರರು ಹಾಜರಿದ್ದರು.
