ಬೆಂಗಳೂರು: ರೂ.2,000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇ.0.4ರಷ್ಟು ಶುಲ್ಕ ವಿಧಿಸುವ ಮೂಲಕ ಸಾಮಾನ್ಯ ಜನರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹಾಕಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಕಿಡಿಕಾರಿದ್ದಾರೆ.
ಯುಪಿಐ ಅನ್ನು ದೇಶದ ಡಿಜಿಟಲ್ ಮತ್ತು ನಗದುರಹಿತ ಆರ್ಥಿಕತೆಯ ಪ್ರಮುಖ ಸಾಧನವಾಗಿ ರೂಪಿಸಲಾಗಿತ್ತು. ಸಣ್ಣ ವ್ಯಾಪಾರಿಗಳು, ಅಂಗಡಿಕಾರರು ಹಾಗೂ ಸಾಮಾನ್ಯ ಜನರು ಯಾವುದೇ ಹೆಚ್ಚುವರಿ ಹೊರೆ ಇಲ್ಲದೆ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ನಿರ್ಮಿಸಲಾಗಿತ್ತು. ಈಗ ಅದೇ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ಮೂಲಕ ಮೋದಿ ಸರ್ಕಾರ ತನ್ನದೇ ಡಿಜಿಟಲ್ ಭಾರತದ ಕನಸಿಗೆ ತಣ್ಣೀರು ಸುರಿದಿದೆ ಎಂದು ಅವರು ಟೀಕಿಸಿದ್ದಾರೆ.
ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸಿದರೆ ಅದರ ಹೊರೆ ಅಂತಿಮವಾಗಿ ವ್ಯಾಪಾರಿಗಳ ಮೂಲಕ ಗ್ರಾಹಕರ ಜೇಬಿಗೆ ಬೀಳುವ ಸಾಧ್ಯತೆಯಿದೆ. ಈಗ ಶೇ.0.4ರ ಶುಲ್ಕಕ್ಕೆ ಅವಕಾಶ ನೀಡಿರುವ ಸರ್ಕಾರ, ಮುಂದಿನ ದಿನಗಳಲ್ಲಿ ದರ ಹೆಚ್ಚಿಸುವ ಅಥವಾ ಹೆಚ್ಚಿನ ವಹಿವಾಟುಗಳನ್ನು ಶುಲ್ಕದ ವ್ಯಾಪ್ತಿಗೆ ತರುವ ಅಧಿಕಾರವನ್ನು ತನ್ನಲ್ಲೇ ಇಟ್ಟು ಕೊಂಡಿರುವುದು ಇನ್ನೂ ಆತಂಕಕಾರಿ ಎಂದಿದ್ದಾರೆ.
ಯುಪಿಐ ಮೂಲಕ ಕೋಟ್ಯಂತರ ಭಾರತೀಯರು ಪ್ರತಿದಿನ ವಹಿವಾಟು ನಡೆಸುತ್ತಿದ್ದಾರೆ. ಇಂತಹ ವ್ಯವಸ್ಥೆಯಿಂದ ಸರ್ಕಾರಕ್ಕೆ ಆದಾಯ ಗಳಿಸುವ ಬದಲು, ಯುಪಿಐ ಮೂಲಸೌಕರ್ಯದಿಂದ ಲಾಭ ಪಡೆಯುತ್ತಿರುವ ದೊಡ್ಡ ಡಿಜಿಟಲ್ ಪಾವತಿ ಕಂಪನಿಗಳಿಂದ ಸೂಕ್ತ ಶುಲ್ಕ ವಸೂಲಿ ಮಾಡುವ ಬಗ್ಗೆ ಸರ್ಕಾರ ಏಕೆ ಚಿಂತಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದು ಡಾ.ಸತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಯುಪಿಐ ವ್ಯವಸ್ಥೆಯನ್ನು ನಿರ್ಮಿಸಿದ NPCIಗೆ ಲಾಭ ಮತ್ತು ನಗದು ಮೀಸಲು ಇರುವಾಗ, ಉಚಿತ ವಹಿವಾಟುಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ಸರ್ಕಾರದ ವಾದವನ್ನು ಯಾವ ಭಾರತೀಯನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಕಡಕ್ಕಾಗಿ ಹೇಳಿದ್ದಾರೆ.
ಜನಸಾಮಾನ್ಯರ ಡಿಜಿಟಲ್ ಪಾವತಿಗಳ ಮೇಲೆ ಹೊರೆ ಹಾಕುವ ಬದಲು, ಸರ್ಕಾರ ತನ್ನ ನೀತಿಯನ್ನು ಮರುಪರಿಶೀಲಿಸಿ ಯುಪಿಐ ವಹಿವಾಟುಗಳನ್ನು ಸಾಮಾನ್ಯ ಜನರಿಗೆ ಉಚಿತವಾಗಿಯೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
