ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಮೈಸೂರಿನ ಶ್ರೀರಾಂಪುರ, ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ಗಣೇಶೋತ್ಸವದ ವೇಳೆ ವಿಶೇಷ ಗಣಪತಿ ಹೋಮವನ್ನು ನೆರವೇರಿಸಲಾಯಿತು.
ಬಡಾವಣೆಯ ಗಣೇಶೋತ್ಸವದಲ್ಲಿ ಎ. ಎನ್. ರಾಮಕೃಷ್ಣ ಹಾಗೂ ನಿರ್ಮಲಾ ದಂಪತಿ ಗಣಪತಿ ಹೋಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರು,ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರತವು ಇಂದು ವಿಶ್ವದಲ್ಲಿ ಹೆಚ್ಚಿನ ಮಾನ್ಯತೆ ಗಳಿಸಿರುವುದಕ್ಕೆ ಅವರ ಆಡಳಿತ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿಯವರಿಗೆ ಇನ್ನೂ ಹೆಚ್ಚಿನ ಶಕ್ತಿ,ಆರೋಗ್ಯ ಮತ್ತು ಆಯಸ್ಸು ದೊರೆಯಲಿ. ದೇಶದಲ್ಲಿ ಬರಗಾಲ ನಿವಾರಣೆಯಾಗಿ ಉತ್ತಮ ಮಳೆಯಾಗಲಿ ಎಂದು ಗಣಪತಿ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಹೋಮದ ಅಂಗವಾಗಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುಣ್ಯಾಹವಾಚನ, ನವಗ್ರಹ ಪೂಜೆ, ಗಣಪತಿ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ವಿಶೇಷವಾಗಿ ಮೋದಕ ಹಾಗೂ ಅಷ್ಟದ್ರವ್ಯಗಳಿಂದ ಹೋಮವನ್ನು ಆಚರಿಸಲಾಯಿತು.
ಹೋಮ ಮತ್ತು ಪೂಜೆಯಲ್ಲಿ ಬಡಾವಣೆಯ ಅಧ್ಯಕ್ಷ ಕೆ. ಆರ್. ಗಣೇಶ್, ಕಾರ್ಯದರ್ಶಿ ನಾಗಭೂಷಣಾಚಾರಿ, ಪುನೀತ್ ಜಿ, ಮಂಜುನಾಥ್, ಮೋಹನ್, ಕಾರ್ತಿಕ್ ಸೇರಿದಂತೆ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.
