ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರಗು ಬಂದಿದ್ದು, ಅಭಿಮಾನಿಗಳ ಹೆಮ್ಮೆಯ ಆನೆ, ಮಾಜಿ ಕ್ಯಾಪ್ಟನ್ ಅಭಿಮನ್ಯು ಮೈಸೂರು ಅರಮನೆ ಆವರಣಕ್ಕೆ ಆಗಮಿಸಿದನು
ಕಳೆದ ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಶಾಂತಚಿತ್ತದಿಂದ ಹೊತ್ತು ಮೈಸೂರು ದಸರಾಗೆ ಕೀರ್ತಿ ತಂದಿದ್ದ ಅಭಿಮನ್ಯು, ವಯೋಮಿತಿ ಕಾರಣದಿಂದ ಕಳೆದ ವರ್ಷ ನಿವೃತ್ತಿ ಹೊಂದಿತ್ತು.
ಆದರೆ ಈ ಬಾರಿ ದಸರಾ ಮಹೋತ್ಸವದಲ್ಲಿ ನಿಶಾನೆ ಆನೆಯಾಗಿ ಮೆರವಣಿಗೆಗೆ ಚಾಲನೆ ನೀಡುವ ಮಹತ್ವದ ಜವಾಬ್ದಾರಿಯನ್ನು ಹೊತ್ತು ಮತ್ತೆ ಅರಮನೆಗೆ ಮರಳಿದೆ.
ಅರಮನೆ ಮುಖ್ಯದ್ವಾರಕ್ಕೆ ಆಗಮಿಸುತ್ತಿದ್ದಂತೆ ಅಭಿಮನ್ಯುವಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಅರಮನೆ ಮಂಡಳಿ ಸಿಬ್ಬಂದಿ, ಮಾವುತರು ಹಾಗೂ ಕಾವಾಡಿಗಳು ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಬಳಿಕ ಅರಮನೆ ಆವರಣದಲ್ಲಿ ಅಭಿಮನ್ಯುವಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಮಾವುತ ವಸಂತ ಮತ್ತು ತಂಡ ಅಭಿಮನ್ಯುವಿಗೆ ಆರತಿ ಬೆಳಗಿ, ಸಿಹಿ ತಿನಿಸುಗಳನ್ನು ನೀಡಿ ಸಂಭ್ರಮಿಸಿದರು.
ದಸರಾ ಜಂಬೂಸವಾರಿ ಮೆರವಣಿಗೆಯು ನಿಶಾನೆ ಆನೆಯ ನೇತೃತ್ವದಲ್ಲಿಯೇ ಸಾಗುವುದು ವಾಡಿಕೆ. ಅತ್ಯಂತ ಅನುಭವಿ, ಧೈರ್ಯಶಾಲಿ ಮತ್ತು ಶಾಂತ ಸ್ವಭಾವದ ಆನೆಯನ್ನೇ ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗುತ್ತದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಅಭಿಮನ್ಯುವಿಗೆ ಆ ಗೌರವ ಸಿಕ್ಕಿದೆ. ಅಭಿಮನ್ಯು ಆಗಮನದಿಂದ ಗಜಪಡೆಯ ಉಳಿದ ಆನೆಗಳಿಗೂ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಮನೆ ಮಂಡಳಿ ಅಧಿಕಾರಿಗಳು, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಾಸಕ ಶ್ರೀವತ್ಸ, ಪಶುವೈದ್ಯರ ತಂಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
