ಮೈಸೂರು: ಮೈಸೂರಿನಲ್ಲಿ ದಸರಾ ಪರಂಪರೆಯನ್ನು ವಿಜಯನಗರದ ನಂತರ ಮುಂದುವರಿಸಿದ್ದು ಯದುವಂಶ.ರಾಜಮಾತೆ ಪ್ರಮೋದಾದೇವಿ ಅವರು ಹೇಳಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಲಕ್ಷಾಂತರ ಜನ ಸೇರುವಾಗ ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತದೆ. ನಾನೀಗ ಯಾರ ಮೇಲೂ ದೂಷಣೆ ಮಾಡಲು ಹೋಗುವಿದಿಲ್ಲ, ಮುಂದೆ ಇಂತಹ ವ್ಯತ್ಯಾಸಗಳು ಆಗದಂತೆ ಕ್ರಮವಹಿಸಲಿ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನು ನೋಡಿದ್ದೇನೆ. ಇದೇ ಮಾತನ್ನು ನಿಮ್ಮ ಬಗ್ಗೆ ಆಡಿದರೆ ಅಟ್ರಾಸಿಟಿ ಕೇಸ್ ಹಾಕ್ತಿದ್ರಿ, ದಲಿತರ ಅವಮಾನ ಮಾಡಿದ್ರು ಅಂತ ಎಲ್ಲೆಡೆ ಪ್ರತಿಭಟಿಸಿ ಬೊಬ್ಬೆ ಇಡುತ್ತಿದ್ರಿ. ನೀವೊಬ್ಬ ಸೀನಿಯರ್ ಪೊಲಿಟಿಷಿಯನ್, 50 ವರ್ಷಗಳ ರಾಜಕೀಯ ಅನುಭವ ಹೊಂದಿದ್ದೀರಿ. ಮಾತನಾಡುವ ಮೊದಲು ನಿಮ್ಮ ಬಗ್ಗೆ ಹೀಗೆ ಮಾತನಾಡಿದರೆ ಏನಾಗುತ್ತಿತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದರು.
ಆರ್ಎಸ್ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕಳೆದ ದಸರಾದಲ್ಲಿ ಹಕ್ಕಿ-ಪಿಕ್ಕಿ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ನಮ್ಮ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದರು. ಕೋರ್ಟ್ ಕೂಡ ಅಪರಾಧಿಗೆ ಮರಣದಂಡನೆ ವಿಧಿಸಿ ಒಂದು ಲಕ್ಷ ಪರಿಹಾರಕ್ಕೆ ಸೂಚಿಸಿದೆ.
ಈ ಹಿಂದೆ ಆರ್ಡಿಪಿಆರ್ ಮತ್ತು ಐಟಿ-ಬಿಟಿ ಸಚಿವರಾಗಿದ್ದಿರಿ, ಈಗಲೂ ಇದ್ದೀರಿ, ಜೊತೆಗೆ ಗೃಹ ಇಲಾಖೆ ವಹಿಸಿಕೊಂಡಿದ್ದೀರಿ. ಮೃತಪಟ್ಟ ಮಗು ಕಲಬುರ್ಗಿಯದ್ದು, ಆ ಮಗು ದಲಿತ ಸಮುದಾಯಕ್ಕೆ ಸೇರಿದ್ದಲ್ಲವೇ? ಈ ವರೆಗೆ ಮಗು ಬಗ್ಗೆ, ಪರಿಹಾರದ ಬಗ್ಗೆ ಒಂದೂ ಮಾತು ಆಡಿಲ್ಲ. ದಲಿತರಲ್ಲಿ ನಿಮ್ಮ ಕ್ಯಾಟಗರಿ ಜನರ ಬಗ್ಗೆ ಮಾತ್ರ ನಿಮ್ಮ ಕಾಳಜಿನಾ? ಜನರ ಜೀವನ ಕಾಡುವ ಸಮಸ್ಯೆ ಬಗ್ಗೆ ಸ್ಪಂದಿಸಿ, ಪೊಲೀಸ್ ಇಲಾಖೆ ಸದೃಢಗೊಳಿಸುವ ಕಾರ್ಯ ಮಾಡಿ, ಪ್ರತಿನಿತ್ಯ ಹೀಗೆ ತರಲೆ ಮಾಡಿಕೊಂಡು ಇರಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಚಾಟಿ ಬೀಸಿದರು.
