ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಂ.ಎಸ್. ರಾಮಾನುಜ ಅವರು ಮಹರ್ಷಿ ವಾಲ್ಮೀಕಿಯವರ ಜೀವನ, ಆದರ್ಶಗಳು ಹಾಗೂ ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು.
ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣವು ಕೇವಲ ಮಹಾಕಾವ್ಯವಲ್ಲ ಅದು ಮಾನವೀಯ ಮೌಲ್ಯಗಳು, ಧರ್ಮ, ಸತ್ಯ, ತ್ಯಾಗ, ಕರ್ತವ್ಯಪ್ರಜ್ಞೆ ಮತ್ತು ಆದರ್ಶ ಜೀವನದ ಸಂದೇಶವನ್ನು ಸಾರುವ ಮಹಾನ್ ಗ್ರಂಥವಾಗಿದೆ. ವಾಲ್ಮೀಕಿಯವರ ಜೀವನವು ವ್ಯಕ್ತಿಯ ಪರಿವರ್ತನೆಗೆ ಸಾಕ್ಷಿಯಾಗಿದ್ದು, ದೃಢಸಂಕಲ್ಪ ಮತ್ತು ಆತ್ಮಜ್ಞಾನದಿಂದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಉನ್ನತ ಸ್ಥಾನವನ್ನು ತಲುಪಬಹುದು ಎಂಬುದನ್ನು ಸಾರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಚಾರಿತ್ರ್ಯ, ಶಿಸ್ತು, ಮಾನವೀಯತೆ ಮತ್ತು ಸಮಾಜದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯ ಹಾಗೂ ಮಹನೀಯರ ಜೀವನಚರಿತ್ರೆಯ ಅಧ್ಯಯನವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಎಂ.ಎಸ್. ರಾಮಾನುಜ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಮಾತನಾಡಿ, ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಜೀವನದ ಮೌಲ್ಯಗಳನ್ನು ಅರಿತುಕೊಂಡು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನಗಳಾಗಬೇಕು. ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಕೃತಿಗಳು ಇಂದಿನ ಯುವಜನತೆಗೆ ಸದಾ ಪ್ರೇರಣೆಯಾಗಿವೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಉಪನ್ಯಾಸಕರಾದ ಲಿಂಗಣ್ಣಸ್ವಾಮಿ,ರಂಗಸ್ವಾಮಿ,ನಾಗರಾಜು ,ಸ್ವಾಮಿಗೌಡ ,ಮಾಲತಿ ,ಭವ್ಯ ,ಮೀನಾ ,ಆದಿಲ್ , ರೂಪ ,ಸುಮಿತ್ರ ,ಟಿ ಕೆ ರವಿ, ನಾಗರಾಜ್ ರೆಡ್ಡಿ, ರಾಮಾನುಜಾ, ದಿನೇಶ್, ಹರೀಶ್, ವತ್ಸಲ ,ಪದ್ಮಾವತಿ ,ಅಂಬಿಕಾ, ಮಹದೇವಸ್ವಾಮಿ, ನಿಂಗಯ್ಯ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
