ಹುಣಸೂರು: ಜಿಲ್ಲಾ ಪಂಚಾಯತ್ ಹುಣಸೂರು ಉಪ ವಿಭಾಗದ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸಗೊಬ್ಬರ(ಚಿಲ್ಲರೆ ಸಗಟು) ಬಿತ್ತನೆ ಬೀಜ ಮತ್ತು ಪೀಡೆನಾಶಕ ಮಾರಾಟಗಾರರ ಸಭೆಗೆ ರೈತರನ್ನು ಆಹ್ವಾನಿಸದೆ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ ಚೆಲುವರಾಜು ಇಂದು ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್ ಹುಣಸೂರು ಉಪ ವಿಭಾಗದ ಅಧಿಕಾರಿಗಳು ರಸಗೊಬ್ಬರ,ಭಿತ್ತನೆಬೀಜ ಸಂಬಂಧ ಸಭೆ ಹಮ್ಮಿಕೊಂಡಿದ್ದರು ಇದು ರೈತರಿಗೆ ಸಂಬಂಧಪಟ್ಟ ಸಭೆ ಆಗಿದ್ದರೂ ಯಾವುದೇ ರೈತ ಮುಖಂಡರನ್ನಾಗಲಿ, ರೈತ ಸಂಘಟನೆಯ ಅಧ್ಯಕ್ಷರನ್ನಾಗಿ ಕರೆಯದೆ ಸಭೆ ನಡೆಸಿದ್ದಾರೆ ಎಂದು ಕಿಡಿ ಕಾರಿದರು.
ಇದನ್ನು ನಾನು ಪ್ರಶ್ನಿಸಲು ಹೋದರೆ ಅಲ್ಲಿದ್ದ ಕೆಲ ಅಧಿಕಾರಿಗಳು ನನ್ನ ಮೇಲೆ ದೌರ್ಜನ್ಯ ಕೂಡ ನಡೆಸಿದರು. ಆದರೆ ಮತ್ತೆ ಕೆಲವು ಅಧಿಕಾರಿಗಳು ಆಯ್ತು ಕುಳಿತುಕೊಳ್ಳಿ ಎಂದು ಹೇಳಿ ಸಮಾಧಾನ ಕೂಡ ಮಾಡಿದರು ಎಂದು ಮಾಹಿತಿ ನೀಡಿದರು.
ಬೆಳೆ ಬೆಳೆಯುವವರು ರೈತರು. ಅವರಿಗೆ ಯಾವ ಬೀಜ ಉತ್ತಮ ಎಂಬುದು ತಿಳಿಯಬೇಕು, ಯಾವ ರಸಗೊಬ್ಬರ ಒಳ್ಳೆಯದು ಎಂಬುದು ತಿಳಿಯಬೇಕು ಇಂತಹ ಅಮೂಲ್ಯವಾದ ಸಭೆಗೆ ರೈತರನ್ನು ಆಹ್ವಾನಿಸದೆ ಇದ್ದುದು ಸರಿಯಲ್ಲ ಈ ಬಗ್ಗೆ ನಾನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಚೆಲುವರಾಜು ತಿಳಿಸಿದರು.
ನಮ್ಮ ಹುಣಸೂರಿನಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ರೈತರಿಂದ ಹೆಚ್ಚು ಬೆಲೆ ಪಡೆಯುತ್ತಾರೆ.ಸರ್ಕಾರದ ದರ ಒಂದು ರೀತಿ ಇದ್ದರೆ ಇಲ್ಲಿ ದುಪ್ಪಟ್ಟು ಬೆಲೆ ತೆಗೆದುಕೊಳ್ಳುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಈ ಸಭೆಗೆ ರೈತರನ್ನು ಆಹ್ವಾನಿಸಿದ್ದರೆ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು.ಆದರೆ ಅದಕ್ಕೆ ಅವಕಾಶವನ್ನೇ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
