(ವರದಿ.ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೋ ಉರುಳಿ ಬಿದ್ದು ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದು ಒಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲ್ಲೂಕಿನ ಮಧುವನಹಳ್ಳಿ – ನರೀಪುರ ಬೈಪಾಸ್, ಕೆಸಿಫ್ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಬೆಂಗಳೂರಿನ ಮನೋಜ್ (24) ಕೀರ್ತಿ (20) ಮೃತ ದುರ್ದೈವಿಗಳು. ಲಕ್ಷ್ಮೀಕಾಂತ್ ಅಲಿಯಾಸ್ ಲಕ್ಷ್ಮಣ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ತುಮಕೂರು ಪಟ್ಟಣದ ಸರಸ್ವತಿಪುರಂ ಕನಕರಾಜು ಅವರ ಮಗ ಮನೋಜ್ ಹಾಲಿ ಬೆಂಗಳೂರಿನ ರಾಜಗೋಪಾಲ್ ನಗರದ ಆಟೋ ಡ್ರೈವರ್, ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಳಕಟ್ಟೆ ಗ್ರಾಮದ ಮಲ್ಲೇಶ್ ಅವರ ಮಗ ಕೀರ್ತಿ (22) ಹಾಲಿ ಬೆಂಗಳೂರಿನ ಸಿಂಗನಪುರದ ಆಟೋ ಡ್ರೈವರ್, ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಬೀರಾಳು ಗ್ರಾಮದ ಲಕ್ಷ್ಮಿಕಾಂತ್ ಅಲಿಯಾಸ್ ಲಕ್ಷ್ಮಣ (26) ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.
ಈ ಮೂವರು ಯುವಕರು ಗುರುವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಲು ಪ್ಯಾಸೆಂಜರ್ ಆಟೋದಲ್ಲಿ ಹೊರಟಿದ್ದಾರೆ.
ಈ ವೇಳೆ ತಾಲ್ಲೂಕಿನ ಮಧುವನಹಳ್ಳಿ – ನರೀಪುರ ಬೈಪಾಸ್ ನ ಕೆಸಿಫ್ ರಸ್ತೆಯಲ್ಲಿ ಬರುತ್ತಿದ್ದಾಗ ಆಟೋ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಘಟನೆಯಿಂದ ಚಾಲಕ ಮನೋಜ್ ಹಾಗೂ ಹಾಗೂ ಹಿಂಬದಿ ಕುಳಿತಿದ್ದ ಕೀರ್ತಿ ಸಾವನ್ನಪ್ಪಿದ್ದಾರೆ.
ಇಂದು ಮುಂಜಾನೆ ಒಂದು ಗಂಟೆಯಿಂದ ನಾಲ್ಕು ಗಂಟೆ ವೇಳೆಯಲ್ಲಿ ಈ ಘಟನೆ ಸಂಭವಿಸಿರ ಬಹುದು ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಶವಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಿ,ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಜಿಲ್ಲೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್, ಕೊಳ್ಳೇಗಾಲ ಡಿ ವೈ ಎಸ್ ಪಿ ಜೆ.ಮೋಹನ್, ವೃತ್ತ ನಿರೀಕ್ಷಕ ಎನ್.ರವೀಂದ್ರ, ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಚೆಲುವರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
