ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.
ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ ಎಕ್ಸ್ಚೇಂಜ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ನಡೆದಿದೆ ಎಂಬ ಸತ್ಯಾಂಶ ತಿಳಿದುಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸ್ಟಿಂಗ್ ಆಪರೇಷನ್ ತನಿಖೆಯನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತಷ್ಟು ತೀವ್ರಗೊಳಿಸಿದ್ದು, ಅತ್ಯಂತ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ.
ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ಮೊಬೈಲ್ ಫೋನ್ ಎಕ್ಸ್ಚೇಂಜ್ ಆಗಿದೆ ಎಂಬ ವಿಚಾರ ತನಿಖೆಯಲ್ಲಿ ಸತ್ಯವೆಂದು ತಿಳಿದುಬಂದಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖಾ ಪ್ರಗತಿ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಜ್ವಲ್ ಪ್ರಸಾದ್ ಖರೀದಿ ಮಾಡಿದ್ದ ಮೊಬೈಲ್ ಮೂಲಕವೇ ಈ ಸ್ಟಿಂಗ್ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇದನ್ನು ರಿತೇಶ್ ಪಾಂಡೆ ಮುಖಾಂತರ ಅಪ್ಲೋಡ್ ಮಾಡಿಸಲಾಗಿದೆ. ಆದರೆ ಅಪ್ಲೋಡ್ ಮಾಡಲು ಸೂಚನೆ ನೀಡಿದ್ದ ಸೂತ್ರಧಾರ ಯಾರು ಎಂಬುದರ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್ ಎಕ್ಸ್ಚೇಂಜ್ ಆಗಿರುವುದಕ್ಕೆ ಪೂರಕವಾದ ಮಹತ್ವದ ದಾಖಲೆಗಳು ಈಗಾಗಲೇ ಪತ್ತೆಯಾಗಿವೆ. ಅಲ್ಲದೆ, ಮೊಬೈಲ್ ಖರೀದಿ ಮಾಡಿದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳೂ ಸಹ ಪೊಲೀಸರಿಗೆ ಸಿಕ್ಕಿವೆ. ಮುಂದಿನ ದಿನಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಪ್ರಮುಖ ಪ್ರಕರಣದ ತನಿಖೆಯಲ್ಲಿ ರಿತೇಶ್ ಪಾಂಡೆ ನೀಡಿದ ಹೇಳಿಕೆಯ ಆಧಾರದ ಮೇಲೆ ಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದಂತೆ ನಡೆದಿದೆಯಾ ಅಥವಾ ಪ್ರಕರಣದ ಹಿಂದೆ ಯಾರ ಸಂಚು ಕೆಲಸ ಮಾಡಿದೆ ಎಂಬುದರ ಕುರಿತು ಆಳವಾದ ತನಿಖೆ ನಡೆಯುತ್ತಿದೆ. ಪ್ರಕರಣದ ಪ್ರಮುಖ ಪ್ರಜ್ವಲ್ ಪ್ರಸಾದ್ ಹಾಗೂ ವಿನೋದ್ ಶರ್ಮಾ ನಾಪತ್ತೆಯಾಗಿದ್ದಾರೆ ಅವರ ಪತ್ತೆಗೆ ನಮ್ಮ ಪೊಲೀಸರ ವಿಶೇಷ ತಂಡ ಹುಡುಕಾಟ ನಡೆಸುತ್ತಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಪ್ರಸ್ತುತ ತನಿಖೆಯು ಅತ್ಯಂತ ಸೂಕ್ಷ್ಮ ಹಂತದಲ್ಲಿದ್ದು, ಈಗಲೇ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ನಾಪತ್ತೆಯಾಗಿರುವ ಪ್ರಜ್ವಲ್ ಪ್ರಸಾದ್ ಬಂಧನವಾದ ನಂತರ ಈ ಇಡೀ ಜಾಲದ ಹಿನ್ನೆಲೆ, ಯಾರ ಪಾತ್ರ ಎಷ್ಟಿದೆ ಎಂಬುದು ಪೂರ್ಣ ಪ್ರಮಾಣದಲ್ಲಿ ಗೊತ್ತಾಗಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ್ದು,ತೀವ್ರ ಕುತೂಹಲ ಕೆರಳಿಸಿದೆ.ಮುಂದೆ ಇನ್ನೇನು ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
