ಕೊಳ್ಳೇಗಾಲ: ಇದೇ ಜ.14 ರಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಈ ಕುರಿತು ಜಂಟಿ ಪತ್ರಿಕಾ ಘೋಷ್ಠಿ ಯಲ್ಲಿ ಡಾ. ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗ ಚಾಮರಾಜನಗರ ಹಾಗೂ ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಮಂಟೇಸ್ವಾಮಿ ನೀಲಗಾರ ಪರಂಪರೆ ಕರ್ನಾಟಕ ರಾಜ್ಯದ ವಿಶಿಷ್ಟ ಜಾತ್ರೆ ಮತ್ತು ಸಂಸ್ಕೃತಿ.
ಮಂಟೇಸ್ವಾಮಿ ಜನಪದ ಕಾವ್ಯ ಮತ್ತು ನೀಲಗಾರ ಸಂಸ್ಕೃತಿ ಜಾತ್ಯಾತೀತತೆ, ಏಕತೆ, ಸೌಹಾರ್ದ, ಸಮನ್ವಯತೆ ತತ್ವಗಳನ್ನು ಸಾರುತ್ತದೆ.
ಭಾರತದ ಸಂವಿಧಾನದ ಆಶಯಗಳನ್ನು ಪ್ರಜಾ ಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಗ್ರಾಮೀಣ ಜನಪದ ಸಮುದಾಯಗಳ ನಡುವೆ ಇರುವ ಇಂತಹ ಮಂಟೇಸ್ವಾಮಿ ಸಿದ್ದಪ್ಪಾಜಿ ಜಾತ್ರೆಗಳು ಮತ್ತು ಭಕ್ತಾಧಿಗಳ ಆಚರಣೆಗಳು ಮುಂದಿನ ಸಮಾಜಕ್ಕೂ ಮಾದರಿಯಾಗಿದೆ.
ಇಂತಹ ದೇಶೀಯ ಬಹುಜನ ಸಮುದಾಯಗಳಿಗೆ ಸಂಬಂಧಿಸಿದ ಜಾತ್ರೆಗಳು, ಸಂಸ್ಕೃತಿ ಮುನ್ನೆಲೆಗೆ ಬರಬೇಕಿದೆ.
ಮಂಟೇಸ್ವಾಮಿ ಸಾಹಿತ್ಯ, ಸಂದೇಶ, ಆದರ್ಶಗಳನ್ನು ನಾಡಿನಾದ್ಯಾಂತ ವಿಸ್ತರಿಸಬೇಕಿದೆ.ಆದರೆ ದುರಾದೃಷ್ಟವಶಾತ್ ವಿನಾಕಾರಣ ನೀಲಗಾರರ ಆಚರಣೆಗಳನ್ನು ವಿವಾದಕ್ಕೀಡುಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧವೂ, ಭವ್ಯ ಪರಂಪರೆಯೂ ಆಗಿರುವ ಮಂಟೇಸ್ವಾಮಿ ಕ್ಷೇತ್ರಗಳಲ್ಲಿನ ನೈಜ ಅರಿವಿನ ಉದ್ದೇಶಕ್ಕಾಗಿ ಸಚಿವರು ಚಿಕ್ಕಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಈಗಾಗಲೇ ಜಾತ್ರೆ ಸಮಯದಲ್ಲಿ ಭಕ್ತರ ಹಿತದೃಷ್ಠಿಯಿಂದ ರಸ್ತೆ ಸಾರಿಗೆ,ಕುಡಿಯುವ ನೀರು, ಸ್ನಾನ ಘಟ್ಟ, ಶೌಚಾಲಯ ಮುಂತಾದ ಅನುಕೂಲತೆಗಳನ್ನು ಶಾಸಕರು, ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ.
ಜಾತ್ರೆಯ ಸಹಪಂಕ್ತಿ ಭೋಜನದ ಆಚರಣೆಯನ್ನು ಸಹ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲಾ ಸ್ಥಿತಿಗತಿಗಳನ್ನು ನಿವಾರಿಸುವ ಬಗೆಗೆ ಸಂಘಟನೆಗಳು, ಭಕ್ತಾಧಿಗಳು ಸಚಿವರ ಗಮನ ಸೆಳೆಯಲಾಗಿತ್ತು. ಪರಂಪರೆ ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಭಕ್ತರ ಕೋರಿಕೆ ಮೇರೆಗೆ ಸಚಿವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಸಚಿವರು ಮತ್ತು ಸರ್ಕಾರಕ್ಕೆ ಮಂಟೇಸ್ವಾಮಿ ಕೇತ್ರಗಳು ಮತ್ತು ಮಠಗಳ ಬಗ್ಗೆ ಅಪಾರ ಗೌರವವಿದೆ. ಮಠಗಳ ಪಾರಂಪರಿಕ ಅಧಿಕಾರ, ಸಂಪ್ರದಾಯಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಈ ಎಲ್ಲಾ ಅಂಶಗಳ ಅವಲೋಕನ ಮತ್ತು ಸಮಸ್ಯೆಗಳ ನಿವಾರಣೆಗೆ ಸಚಿವರನ್ನು ಕೋರಲಾಗುತ್ತದೆ ಎಂದು ಪದಾಧಿಕಾರಿಗಳು ಹೇಳಿದರು.
ಘೋಷ್ಠಿಯಲ್ಲಿ ಡಾ. ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದ ಅಧ್ಯಕ್ಷ ಡಾ.ವಿ.ಎನ್. ಮಹಾದೇವಯ್ಯ, ಸದಸ್ಯ ಮರಿಸ್ವಾಮಿ, ಮಂಟೇಸ್ವಾಮಿ ಪರಂಪರೆ ಹೋರಾಟ ಸಮಿತಿ ಕಾರ್ಯದರ್ಶಿ ಶಂಭುಲಿಂಗಸ್ವಾಮಿ. ಎಲ್, ಸಮಿತಿಯ ಸಂಶೋಧಕರಾದ ಮಹಾದೇವ ಶಂಕನಪುರ ಉಪಸ್ಥಿತರಿದ್ದರು.
