ಮೈಸೂರು: ಶಿವರಾತ್ರಿ ಪಾದಯಾತ್ರೆ ಸಮಯದಲ್ಲಿ ಯಾತ್ರಿಕರಿಂದ ಸ್ವಚ್ಛತೆಗೆ ಧಕ್ಕೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಮನವಿ ಮಾಡಿದ್ದಾರೆ.
ಶಿವರಾತ್ರಿ ಸಮಯದಲ್ಲಿ ಧರ್ಮಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಕರು ಸಾಗುತ್ತಾರೆ. ಈ ದಾರಿಯಲ್ಲಿ ಅನೇಕ ದಾನಿಗಳು ಊಟ, ತಿಂಡಿ, ನೀರು, ಪಾನೀಯ ಇತ್ಯಾದಿಗಳ ವ್ಯವಸ್ಥೆಯನ್ನು
ಮಾಡುವುದು ಸರಿ,ಆದರೆ ಸ್ವಚ್ಛತೆಯನ್ನೂ ಕಾಪಾಡಲಿ ಎಂದು ಹೇಳಿದ್ದಾರೆ.
ಪಾದಯಾತ್ರೆ ವೇಳೆ ಆಹಾರ ಪದಾರ್ಥ ಸ್ವೀಕರಿಸಿದ ನಂತರ ಕೆಲವರು ದಾರಿಯಲ್ಲೇ ನೀರಿನ ಬಾಟಲ್, ಪ್ಲೇಟಗಳು, ಲೋಟ ಇತ್ಯಾದಿಗಳನ್ನು ರಸ್ತೆ ಪಕ್ಕದಲ್ಲೇ ಬಿಸಾಡದಂತೆ ತಿಳುವಳಿಕೆ ಹೇಳಬೇಕು. ಜಿಲ್ಲಾಡಳಿತ ಯಾತ್ರಿಕರು ಸಾಗುವ ಕಡೆ ಅಲ್ಲಲ್ಲಿ ಒಂದು ಕಸದ ತೊಟ್ಟಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಾರ್ಗಮಧ್ಯೆ ಆಯಾ ಗ್ರಾಮ ಪಂಚಾಯಿತಿ ಆಡಳಿತವು ಕಸದ ತೊಟ್ಟಿಗಳನ್ನು ನಿರ್ಮಿಸಿ ಕಸ ಶೇಖರಿಸಬೇಕು. ಈ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೋಂಗಾರ್ಡ್ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಹೇಳಿದ್ದಾರೆ.
ಪಾದಯಾತ್ರಿಗಳು ಹಾಗೂ ದಾನಿಗಳು ಪರಿಸರ ಸ್ವಚ್ಛತೆ ಪಾಲಿಸುವಂತೆ ಸಾರ್ವಜನಿಕರಿಗೆ ಮತ್ತು ದಾನಿಗಳಿಗೆ ಅರಿವು ಮೂಡಿಸಲು ಜಿಲ್ಲಾಡಳಿತವು ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿ ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ವಿಕ್ರಮ್ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
