(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಸಪಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ ಎಸ್ ಶಂಕರ್ ಅಂಕಣಶೆಟ್ಟಿಪುರ ಅವರು ಕೊಳ್ಳೇಗಾಲ ಯಳಂದೂರು ಹಾಗೂ ಹನೂರು ತಾಲ್ಲೂಕಿನ ಸ್ವಚ್ಛತಾಗಾರರ ನೇರ ಸಂವಾದ ಕಾರ್ಯಕ್ರಮ ನಡೆಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಪಾಯಿ ಕರ್ಮಚಾರಿಗಳ ಜ್ವಲಂತ ಸಮಸ್ಯೆಗಳಾದ ಮನೆ ಮಂಜೂರಾತಿ, ಉಪಧನ ನೀಡದಿರುವುದು, ಸಂಬಳ ತಾರತಮ್ಯ ಹಾಗೂ ಇನ್ನಿತರ ಸಮಸ್ಯೆಗಳು ಪ್ರತಿಧ್ವನಿಸಿದವು.
ಸ್ವಚ್ಛತಾ ಗಾರರ ಸಮಸ್ಯೆ ಆಲಿಸಿ ಮಾತನಾಡಿದ ಸಿ ಎಸ್ ಶಂಕರ್ ಅವರು ಸಪಾಯಿ ಕರ್ಮಚಾರಿಗಳು ಬೆಳಿಗ್ಗೆಯಿಂದ ಸಂಜೆ ತನಕ ದುಡಿದು ಮನೆಗೆ ಹೋದರೆ ವಾಸಿಸಲು ಮನೆ ಇರುವುದಿಲ್ಲ. ಗ್ರಾಫಂ ನವರು ದುಡಿಸಿಕೊಳ್ಳುತ್ತಾರೆ ಆದರೆ ಪೌರಕಾರ್ಮಿಕರಿಗೆ ಉಪಧನ ಸೇರಿದಂತೆ ಯಾವುದೇ ಸೌಲಭ್ಯ ನೀಡುವುದಿಲ್ಲ, ಸುರಕ್ಷತಾ ಪರಿಕರ ಗಳನ್ನೂ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲಸ ಮಾಡುವ ವೇಳೆ ಯಾವುದಾದರು ಅನಾಹುತಗಳಾದರೆ ಗ್ರಾಫಂ ಪಿಡಿಒಗಳೇ ನೇರ ಹೊಣೆ ಎಂದು ಎಚ್ಚರಿಸಿದರು.
ಈಗಾಗಲೇ ಸ್ವಚ್ಛತಾ ಗಾರರಿಗೆ ಸ್ವಚ್ಛತಾ ಪರಿಕರಗಳನ್ನು ನೀಡದೇ ಕೆಲಸ ಮಾಡಿಸುತ್ತಿದ್ದ ಮದುವನಹಳ್ಳಿ ಗ್ರಾಮ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಸಿ ಎಸ್ ಶಂಕರ್ ಹೇಳಿದರು.
ನಾನು ಸಪಾಯಿ ಕರ್ಮಚಾರಿ ಆಯೋಗದ ಸದಸ್ಯನಾದ ನಂತರ ರಾಜ್ಯದ್ಯಂತ ಪ್ರವಾಸ ಮಾಡಿ ಸುಮಾರು 48 ಸಭೆಗಳನ್ನು ನಡೆಸಿದ್ದೇನೆ, ಇದು 49 ನೆಯದು, ಪ್ರತೀ ಸಭೆಗಳಲ್ಲಿ ಪೌರಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸುತ್ತ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಮನೆ ಇಲ್ಲದ ಪೌರ ಕಾರ್ಮಿಕರನ್ನು ಗುರುತಿಸಿ ಕೂಡಲೇ ನಿವೇಶನ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ, ಪಾಲಿಸದಿದ್ದರೆ ಅನು ಪಾಲನಾ ವರದಿ ಧರಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
