ಬೆಂಗಳೂರು: ಯುವಜನರು ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ತೋರಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ಅವರು ಕರೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಯುವ ಕ್ರೀಡಾಪಟು ಹಾಗೂ ಕವಿ ಎಂ.ಎಚ್. ಕೀರ್ತಿ ಕುಮಾರ್ ಅವರು ಕ್ರೀಡಾ ಕ್ಷೇತ್ರದ ಜೊತೆಗೆ ಸಾಹಿತ್ಯ ಮತ್ತು ಕಾವ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವುದು ಯುವಜನರಿಗೆ ಅನುಕರಣೀಯವಾಗಿದೆ ಎಂದು ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ಕನ್ನಡ ಜಾನಪದ ಪರಿಷತ್ ವತಿಯಿಂದ ಯುವ ಕವಿ ಎಂ.ಎಚ್. ಕೀರ್ತಿ ಕುಮಾರ್ ಅವರನ್ನು ಅಭಿನಂದಿಸಿ ಗೌರವಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಜನರು ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನೂ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇದರಿಂದ ಅವರಲ್ಲಿರುವ ಬಹುಮುಖ ಪ್ರತಿಭೆ ಹೊರ ಜಗತ್ತಿಗೆ ಪರಿಚಯವಾಗುವುದರ ಜೊತೆಗೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬ್ಯಾಸ್ಕೆಟ್ಬಾಲ್ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಕೀರ್ತಿ ಕುಮಾರ್ ಅವರು ಸಾಹಿತ್ಯ ಮತ್ತು ಕಾವ್ಯ ರಚನೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಸಾಧನೆ ಮಾಡಿರುವುದು ಪ್ರಶಂಸನೀಯ ಎಂದು ಡಾ. ಬಾಲಾಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಸಿ. ಕಾಂತಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್, ಪದಾಧಿಕಾರಿಗಳಾದ ಶ್ರೀಕಾಂತ್ ರಾಜು ಜಿ., ಸಾಹಿತಿ ಸಂದೇಶ್ ಕುಂಬಾರ್ ಮತ್ತಿತರರು ಉಪಸ್ಥಿತರಿದ್ದರು.
