ಮೈಸೂರು: ರಾಜ್ಯ ಸರಕಾರದ ‘ಋತು ತಾರೆ’
ಯೋಜನೆ ಸ್ವಾಗತಾರ್ಹ ಎಂದು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಹೇಳಿದ್ದಾರೆ.
ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಋತುಚಕ್ರದ ಆರೋಗ್ಯ, ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಮೂಡಿಸುವ ಮಹತ್ವದ ಉಪಕ್ರಮ ಋತು ತಾರೆ ಯೋಜನೆ.
ಮಹಿಳೆಯರ ಮೇಲಿನ ಕಾಳಜಿ ದೃಷ್ಟಿಯಿಂದ ರಾಜ್ಯ ಸರಕಾರ ಆರಂಭಿಸುತ್ತಿರುವ ಈ ಯೋಜನೆ ಸ್ವಾಗತಾರ್ಹ ಎಂದು ರೇಖಾ ಶ್ರೀನಿವಾಸ್ ಹೇಳಿದ್ದಾರೆ
ಋತುಚಕ್ರದ ಕುರಿತು ಇರುವ ಮೂಢನಂಬಿಕೆ, ತಪ್ಪು ಕಲ್ಪನೆ ಮತ್ತು ಮುಜುಗರವನ್ನು ನಿವಾರಿಸಿ, ವೈಜ್ಞಾನಿಕ ಮಾಹಿತಿಯನ್ನು ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಿಶೋರಿಯರಿಗೆ ಸುರಕ್ಷಿತ ಹಾಗೂ ಆರೋಗ್ಯಕರ ಮುಟ್ಟಿನ ಸ್ವಚ್ಛತಾ ಪದ್ದತಿಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಮುಟ್ಟಿನ ಕಾರಣದಿಂದ ಅವರ ಶಿಕ್ಷಣ ಮತ್ತು ಶಾಲಾ ಹಾಜರಾತಿಗೆ ಯಾವುದೇ ಅಡ್ಡಿಯಾಗ ದಂತೆ ಅಗತ್ಯ ಬೆಂಬಲ ನೀಡುವುದು ಮುಖ್ಯವಾಗಿದೆ ಎಂದು ಪ್ರಕಟಣೆ ಮೂಲಕ ಅವರು ಹೇಳಿದ್ದಾರೆ.
ಸ್ಯಾನಿಟರಿ ಪ್ಯಾಡ್ಗಳ ಬಳಕೆಯ ಜೊತೆಗೆ ಮೆನ್ಷುವಲ್ ಕಪ್ಗಳಂತಹ ಪರಿಸರ ಸ್ನೇಹಿ ಪರ್ಯಾಯಗಳ ಬಗ್ಗೆ ಸೂಕ್ತ ಅರಿವು ಮೂಡಿಸುವುದೂ ಅಗತ್ಯವಾಗಿದೆ. ಇದರೊಂದಿಗೆ ಮೆನೋಪಾಸ್ ಅಥವಾ ಋತುಬಂಧದ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಕೂಡ ಅತ್ಯಾಗತ್ಯ, ಅಗತ್ಯವಿದ್ದಲ್ಲಿ ವೈದ್ಯಕೀಯ ಸಲಹೆ ಪಡೆಯುವಂತೆ ಮಹಿಳೆಯರನ್ನು ಪ್ರೋತ್ಸಾಹಿಸಬೇಕು ಎಂದು ರೇಖಾ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಪೋಷಕರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಸಮಾಜದ ಸಹಕಾರದೊಂದಿಗೆ ಮುಟ್ಟಿನ ಆರೋಗ್ಯ ಹಾಗೂ ಮಹಿಳೆಯರ ಆರೋಗ್ಯದ ಕುರಿತು ಮುಕ್ತ ಮತ್ತು ವೈಜ್ಞಾನಿಕ ಸಂವಾದವನ್ನು ಬೆಳೆಸಬೇಕಾಗಿದೆ.
‘ಋತು ತಾರೆ’ ಕೇವಲ ಋತುಚಕ್ರದ ಸ್ವಚ್ಛತೆಯ ಕಾರ್ಯಕ್ರಮವಲ್ಲ. ಕಿಶೋರಿಯರಿಂದ ಹಿಡಿದು ಮೆನೋಪಾಸ್ ಹಂತದ ಮಹಿಳೆಯರವರೆಗೆ ಪ್ರತಿಯೊಬ್ಬರಿಗೂ ಆರೋಗ್ಯ ಗೌರವ ಅರಿವು ಮತ್ತು ಆತ್ಮವಿಶ್ವಾಸ ಒದಗಿಸುವ ಸಮಗ್ರ ಮಹಿಳಾ ಆರೋಗ್ಯದ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.
