(ವರದಿ:ಎಂ.ಎನ್ ಸುರೇಶ್,ಕನಕಪುರ)
ಕನಕಪುರ: ಪತ್ನಿ ಮತ್ತು ಮನೆಯವರ ಮಾನಸಿಕ ಕಿರುಕುಳದಿಂದ ಮನನೊಂದು ಟೆಕ್ಕಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಫ್ಟ್ವೇರ್ ಇಂಜಿನಿಯರ್ ರೋಷನ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಸಾಫ್ಟ್ವೇರ್ ಇಂಜಿನಿಯರ್ ಅಷ್ಟೇ ಅಲ್ಲ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಹಳ ಪ್ರಸಿದ್ಧಿಯಾಗಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಫಲೋವರ್ಸ್ ಹೊಂದಿದ್ದ.
ಮೂಲತಃ ಮಂಡ್ಯ ಜಿಲ್ಲೆ,ಮಳವಳ್ಳಿ ತಾಲೂಕು,ಶಂಷಾಪುರ ಗ್ರಾಮದ ವಾಸಿ.
ಈತ ಬೆಂಗಳೂರು ಜೆಪಿ ನಗರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕನಕಪುರದ ಕುರು ಪೇಟೆಯಲ್ಲಿ ಮನೆ ಮಾಡಿಕೊಂಡಿದ್ದ.
ಕಳೆದ ತಿಂಗಳಷ್ಟೆ ಮದುವೆಯಾಗಿತ್ತು,ಆದರೆ ಪತ್ನಿ ಮತ್ತು ಮನೆಯವರು ಮಗನಿಗೆ ಕೆಟ್ಟದಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಗ್ರಾಮಾಂತರ ಠಾಣೆಗೆ ದೂರು
ನೀಡಿದ್ದಾರೆ.
ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಮನೆಯವರ ಕಿರುಕುಳ ಕಾರಣವೆಂದು ಬರೆದು ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದು ನಂತರ ರೋಷನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ.
ಕನಕಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ರೋಷನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ನೀಡಲಾಗಿದ್ದು,ಇಂದು ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಿದೆ.
