ಬೆಂಗಳೂರು: ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಬಿಡದಿ ಬೃಹತ್ ಪಾದಯಾತ್ರೆಗೆ ಮಿತ್ರಪಕ್ಷ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರಿನಲ್ಲಿ ಶನಿವಾರ ಜೆಡಿಎಸ್ ಮತ್ತು ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜೊತೆ ಹೆಚ್.ಡಿ.ಕೆ ಮಾತನಾಡಿದರು.
ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ನಾವು ಅತ್ಯಂತ ವಿವರವಾಗಿ ಚರ್ಚೆ ನಡೆಸಿದ್ದೇವೆ ಹಾಗೂ ಮುಂಬರುವ ವಿಧಾನ ಮಂಡಲ ಕಲಾಪದಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ವಿವಿಧ ವಿಷಯಗಳ ಬಗ್ಗೆ ಸಮಾಲೋಚಿಸಿದ್ದೇವೆ ಎಂದು ಹೇಳಿದರು.
ಬಿಡದಿ ಪಾದಯಾತ್ರೆಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ಹಮ್ಮಿಕೊಳ್ಳಲಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಬಿಜೆಪಿ ನಾಯಕರು ಕೂಡ ಪಾದಯಾತ್ರೆಯ ಬಗ್ಗೆ ಅತ್ಯಂತ ಸಕಾರಾತ್ಮಕ ಮನಸ್ಸು ಹೊಂದಿದ್ದು,
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ಬಿಜೆಪಿಯ ಅನೇಕ ಹಿರಿಯ ನಾಯಕರು ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮುಂಬರುವ ವಿಧಾನಮಂಡಲ ಕಲಾಪದಲ್ಲಿ ಬಿಡದಿ ಟೌನ್ಶಿಪ್ ವಿಷಯ ಹಾಗೂ ನೈಸ್ ಯೋಜನೆಯ ಅಕ್ರಮಗಳ ಬಗ್ಗೆ ಧ್ವನಿ ಎತ್ತಲು ನಿರ್ಧರಿಸಲಾಗಿದೆ. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಒಮ್ಮತದಿಂದ ಹೋರಾಟ ನಡೆಸಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ಸರಿ ಇಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳು ಇವೆ. ಸಂಪುಟ ವಿಸ್ತರಣೆಗೆ ತಿಂಗಳಗಟ್ಟಲೆ ಸಮಯ ತೆಗೆದುಕೊಂಡರು. ಈಗ ಖಾತೆ ಹಂಚಿಕೆ ಕೂಡ ನಡೆದಿಲ್ಲ. ಸರ್ಕಾರದ ಕಾರ್ಯವೈಖರಿ ನೋಡಿದರೆ ತುಂಬಾ ನಿರಾಶೆಯಾಗುತ್ತದೆ ಕುಮಾರಸ್ವಾಮಿ ಟೀಕಿಸಿದರು.
ರಾಜ್ಯ ಹಿಂದೆಂದೂ ಸಿಲುಕಿರದಷ್ಟು ತೀವ್ರ ಬರಕ್ಕೆ ತುತ್ತಾಗಿದೆ. ಸರ್ಕಾರ ಜನರಿಗೆ ನೆರವಾಗುವಲ್ಲಿ ವಿಫಲವಾಗಿದೆ. ಈ ಬಗ್ಗೆಯೂ ಪ್ರಸ್ತಾಪಿಸಿ ಹೋರಾಟ ಮಾಡಲು ನಿರ್ಧರಿಸಲಾಯಿತು ಎಂದು ಮಾಹಿತಿ ನೀಡಿದರು.
ವಾಲ್ಮೀಕಿ ಹಗರಣ, ಬೆಂಗಳೂರಿನಲ್ಲಿ ಅಸಮರ್ಪಕ ಕಸ ವಿಲೇವಾರಿ, ಕೆಪಿಎಸ್ಸಿ ಅಕ್ರಮಗಳು, ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು, ಗೃಹಲಕ್ಷ್ಮಿ ಯೋಜನೆಯ ಹಣ ದುರ್ಬಳಕೆ ಮುಂತಾದ ವಿಷಯಗಳ ಬಗ್ಗೆ ಎರಡೂ ಪಕ್ಷಗಳು ದನಿಯ ಎತ್ತುತ್ತವೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಲೋಕಸಭೆ ಸದಸ್ಯ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವ ಸಿ.ಸಿ. ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.
